ಸಾರಾಂಶ
ಗದಗ: ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದ ಅಂಗವಾಗಿ ದಿ.ಕೆ.ಎಚ್.ಪಾಟೀಲ ಅಭಿಮಾನಿ ಬಳಗದಿಂದ ಮಾ.3ರಂದು ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ್ ಕೌತಾಳ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಕೆ.ಎಚ್.ಪಾಟೀಲ ಅಭಿಮಾನಿ ಬಳಗದಿಂದ ಕಳೆದ 11 ವರ್ಷಗಳಿಂದ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಹಾಗೂ ಕಳೆದ 6 ವರ್ಷಗಳಿಂದ ಕುಂಭ ಮೆರವಣಿಗೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷವೂ ರಸಮಂಜರಿ, ಕುಂಭ ಮೆರವಣಿಗೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೋಂದಣಿ ಪ್ರಕ್ರಿಯೆಯೂ ಆರಂಭವಾಗಿದೆ. ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಇಚ್ಛಿಸುವ ಹಿಂದು,ಮುಸ್ಲಿಂ ಸೇರಿದಂತೆ ಇತರೆ ಧರ್ಮದವರೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ವಧು-ವರರಿಗೆ ಬಟ್ಟೆ, ಮಾಂಗಲ್ಯ ಸರ ಉಚಿತವಾಗಿ ನೀಡಲಾಗುವುದು.
ಕಳೆದ ವರ್ಷ 34 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದ್ದರು. ಪ್ರಸಕ್ತ ವರ್ಷ 50 ಕ್ಕೂ ಹೆಚ್ಚು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವರು ಎಂಬುದಾಗಿ ಅಂದಾಜಿಸಲಾಗಿದೆ. ಅಲ್ಲದೇ ಪ್ರಸಕ್ತ ವರ್ಷ 1012 ಕುಂಭಗಳೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಮಾ.2ರಂದು ಸಂಜೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾತ್ರಿಯಿಡಿ ರಸಮಂಜರಿ ಕಾರ್ಯಕ್ರಮ ಜರುಗಿಸುವ ಯೋಜನೆಯಿದ್ದು, ಅವಳಿ ನಗರದ ಎಲ್ಲ ಕಲಾವಿದರಿಗೂ ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮುಂತಾದವರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಆನಂದ ಸಾಲಿಗ್ರಾಮ, ವಿನೋದ ಶಿದ್ಲಿಂಗ್, ರಮೇಶ ಮುಳಗುಂದ ಮುಂತಾದವರು ಹಾಜರಿದ್ದರು.ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿರುವ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಹೆಸರನ್ನು ನೋಂದಾಯಿಸುವವರು ಆಧಾರ್ ಕಾರ್ಡ, ಫೋಟೊ ಸಹಿತ ದಾಖಲಾತಿಗಳೊಂದಿಗೆ ಫೆ.20 ರೊಳಗಾಗಿ ನೋಂದಣಿ ಮಾಡಿಸಬಹುದು. ಉಚಿತ ನೋಂದಣಿ ಹಾಗೂ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945255858, 8310694560, 7996068506 ಸಂಪರ್ಕಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ್ ಕೌತಾಳ ತಿಳಿಸಿದ್ದಾರೆ.