ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ವಿಷಯ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.ಹೌದು, ಈ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಪ್ರಮುಖ ಆರೋಪಿಗಳು ತೀರ್ಥಹಳ್ಳಿ ಮೂಲದವರು. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿ ನಂತರ ಅತ್ತಿತ್ತ ಸುತ್ತಾಡುತ್ತ ನಂತರ ತಲೆಮರೆಸಿಕೊಂಡು ಎನ್‌ಐಎಗೂ ಚಳ್ಳೆಹಣ್ಣು ತಿನ್ನಿಸಿದ್ದ ತೀರ್ಥಹಳ್ಳಿ ಮೂಲದವರಾದ ಮುಸಾವಿರ್ ಶಾಜಿದ್ ಮತ್ತು ಅಬ್ದುಲ್ ಮತೀನ್ ಬಂಧನದ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದಂತೆ ಇಲ್ಲಿನ ಜನತೆ ಆಘಾತಕ್ಕೊಳಗಾಗಿದ್ದಾರೆ.ಈಗಾಗಲೇ ಹಲವು ಭಯೋತ್ಪಾನಾ ಚಟುವಟಿಕೆಗಳಲ್ಲಿ ತೀರ್ಥಹಳ್ಳಿಯ ಹೆಸರು ಮುಂಚೂಣಿಗೆ ಬಂದಾಗೆಲ್ಲ ಸುಸಂಸ್ಕೃತ ತಾಲೂಕು ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಜನರಲ್ಲಿ ತೀವ್ರ ಮುಜುಗರ ಉಂಟಾಗಿತ್ತು. ಇದೀಗ ಇಂತಹ ಮುಜುಗರ ಮುಂದುವರಿದಿದೆ.ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಸೇರಿದಂತೆ ಮಂಗಳೂರಿನಲ್ಲಿ ನಡೆದ ಗೋಡೆ ಬರಹ, ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಇತರೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾಪಡೆಗೆ ಬೇಕಿದ್ದ ಮುಸಾವಿರ್ ಶಾಜಿದ್ ಹುಸೇನ್ ಮತ್ತು ಅಬ್ದುಲ್ ಮತೀನ್ ತಾಹನನ್ನು ಪಶ್ಚಿಮ ಬಂಗಾಳದ ಧೀಮ್ ನಗರದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ ಸುದ್ದಿ ತೀವ್ರ ಚರ್ಚೆಗೆ ಒಳಪಟ್ಟಿತ್ತಾದರೂ, ಇನ್ನೊಂದು ಕಡೆಗೆ ಜನರಲ್ಲಿ ಕೊನೆಗೂ ಆರೋಪಿಗಳು ಎನ್‌ಐಎ ವಶವಾಗುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಿಲ್ಲಬಹುದು ಎಂಬ ಸಮಾಧಾನವೂ ಕಂಡು ಬಂದಿದೆ.3 ವರ್ಷದ ಹಿಂದಿನ ನಂಟು: ಸುಮಾರು ಮೂರು ವರ್ಷಗಳ ಹಿಂದೆ ಪಟ್ಟಣ ಸಮೀಪದ ಸುರಾನಿ ಬಳಿ ಮಾರ್ಗ ಮಧ್ಯೆ ನಡೆದ ಸ್ಯಾಟಲೈಟ್ ಫೋನ್ ಕರೆಯ ಸುಳಿವು ಎನ್ಐಎ ಸಿಕ್ಕಿತು. ಇದನ್ನು ಇಟ್ಟುಕೊಂಡು ಎನ್‌ಐಎ ಮುಂದುವರೆಸಿದ ತನಿಖೆ ಒಂದೊಂದೇ ಮಗ್ಗುಲಿಗೆ ಹೊರಳುತ್ತಾ ಸಾಗಿದೆ. ಶಾಂತವಾಗಿದ್ದ ಮಲೆನಾಡು ಕೂಡ ಭೂಗತ ಲೋಕದ ಸಂಪರ್ಕವನ್ನು ಹೊಂದಿರುವ ಸುಳಿವು ದೊರೆಕಿತು. ಈ ಸುಳಿವಿನ ಆಧಾರದ ಮೇಲೆ ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಎನ್ ಐ ಎ ತಂಡ ಶಂಕಿತರು ತಂಗಿದ್ದರೆಂಬ ಗುಮಾನಿಯ ಮೇಲೆ ಸುರಾನಿಯ ತೋಟದ ಮಧ್ಯದಲ್ಲಿರುವ ಮನೆ ಸೇರಿದಂತೆ ಸುತ್ತಲಿನ ಸ್ಥಳದಲ್ಲಿ ಸದ್ದುಗದ್ದಲವಿಲ್ಲದೆ ಪರಿಶೀಲನೆ ಕೂಡಾ ನಡೆಸಿತ್ತು.ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಖ್ಯಾತಿಯ ಉಗ್ರ ಶಾರಿಕ್‌ನನ್ನು ಬಂಧಿಸಿದ ಎನ್ಐಎ ತಂಡಕ್ಕೆ ಉಳಿದ ಈ ಇಬ್ಬರು ಉಗ್ರರು ಸವಾಲಾಗಿಯೇ ಉಳಿದಿದ್ದರು. ದೇಶ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದು ದೃಢಪಟ್ಟ ನಂತರದಲ್ಲಿ ರಾಷ್ಟ್ರೀಯ ತನಿಖಾದಳ ಇವರ ಬೆನ್ನು ಬಿದ್ದಿತ್ತು. ಎನ್‍ಐಎ ತಂಡ ಹಲವಾರು ಬಾರಿ ಇಲ್ಲಿಗೆ ಅಗಮಿಸಿ ಉಗ್ರರ ಮನೆಗಳನ್ನು ಮಾತ್ರವಲ್ಲದೇ ಹತ್ತಿರದ ಸಂಬಂಧಿಗಳು ಮತ್ತು ಅವರ ಒಡನಾಟದಲ್ಲಿರುವವರನ್ನೂ ಕೂಡ ಬೆಂಗಳೂರಿಗೆ ಕರೆಸಿಕೊಂಡು ತನಿಖೆ ನಡೆಸಿತ್ತು. ಈ ಉಗ್ರರ ಜೊತೆ ದೂರವಾಣಿ ಸಂಪರ್ಕ ಮತ್ತು ಸಹಾನುಭೂತಿ ಹೊಂದಿದವರ ಬಗೆಗೂ ರಾಷ್ಟ್ರೀಯ ತನಿಖಾದಳ ಹದ್ದಿನ ಕಣ್ಣಿಟ್ಟಿದೆ ಎಂಬ ಮಾಹಿತಿ ಕೂಡ ಇದೆ.
ಚುರುಕು, ಮೃದು ವ್ಯಕ್ತಿತ್ವದ ಬುದ್ಧಿವಂತ ಹುಡುಗ ಮತೀನ್ತೀರ್ಥಹಳ್ಳಿ: ನಿವೃತ್ತ ಯೋಧರೋರ್ವರ ಪುತ್ರ ಅಬ್ದುಲ್ ಮತೀನ್ ತಾಹ ಎಂಜಿನಿಯರಿಂಗ್ ಪದವೀಧರನಾಗಿದ್ದು, ಪ್ರೌಢಶಾಲೆಯವರೆಗೆ ತೀರ್ಥಹಳ್ಳಿಯಲ್ಲಿಯೇ ಓದಿದ್ದು, ಅತ್ಯಂತ ಚುರುಕು ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿದ್ದ ಎಂದು ಸಮೀಪವರ್ತಿಗಳು ಹೇಳುತ್ತಾರೆ.ಕಲಿಕೆಯಲ್ಲಿಯೂ ನಿಪುಣನಾಗಿದ್ದ ಈತ ಪ್ರೌಢ ಶಿಕ್ಷಣದ ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿ ಎಂಜಿನಿಯರಿಂಗ್ ಪೂರೈಸಿದ್ದ ಆ ಸಂದರ್ಭದಲ್ಲಿಯೇ ಉಗ್ರರ ನೆರಳಿಗೆ ಸಿಲುಕಿದ್ದ ಎನ್ನಲಾಗಿದೆ. ಮೀನು ಮಾರ್ಕೆಟ್ ಬಳಿ ಮನೆ ಇದ್ದು, ಈತ ಒಬ್ಬನೇ ಪುತ್ರ. ಸಮಾಜದಲ್ಲಿ ಇವರ ಕುಟುಂಬ ಒಳ್ಳೆಯ ಹೆಸರು ಇಟ್ಟುಕೊಂಡಿತ್ತು. ತಂದೆ ಒಂದು ವರ್ಷದ ಹಿಂದೆ ತೀರಿಕೊಂಡಿದ್ದು, ಈತನ ತಾಯಿಯ ಬಗ್ಗೆ ಕೂಡ ಒಳ್ಳೆಯ ಅಭಿಪ್ರಾಯವಿದೆ.ಏಕಾಂಗಿ, ನಿಗೂಢ ಮನಸ್ಸಿನವ ಮುಸಾವಿರ್ ಸಾಜಿದ್ ಹುಸೇನ್ತೀರ್ಥಹಳ್ಳಿ: ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಮುಸಾವಿರ್ ಸಾಜಿದ್ ಹುಸೇನ್ ಬಗ್ಗೆ ಸ್ಥಳೀಯರಿಗೆ ಅತ್ಯಂತ ಕಡಿಮೆ ಗೊತ್ತಿದೆ. ಯಾರ ಜೊತೆಗೂ ಹೆಚ್ಚು ಬೆರೆಯದೇ ತನ್ನದೇ ಲೋಕದಲ್ಲಿ ಇರುತ್ತಿದ್ದ ಎನ್ನಲಾಗಿದೆ.ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಇರುವ ಈತನ ಮನೆಯಲ್ಲಿ ತಾಯಿ ಮಾತ್ರ ಇದ್ದಾರೆ. ತಂದೆ ಇಲ್ಲದ ಈತನಿಗೆ ಅಣ್ಣ ಮತ್ತು ತಮ್ಮ ಇದ್ದಾರೆ. ಅಣ್ಣ ಬೇರೆ ಕಡೆಯಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಈತನ ಕುಟುಂಬಕ್ಕೆ ಕಟ್ಟಡ ಬಾಡಿಗೆಯೇ ಮೂಲ ಆದಾಯ. ಈ ಆದಾಯದಲ್ಲಿಯೇ ಬದುಕುತ್ತಿದ್ದ ಈತ ಸದಾ ಮುಸ್ಲಿಂ ಸಾಂಪ್ರಾ ದಾಯಿಕ ಉದ್ದನೆಯ ಬಿಳಿ ನಿಲುವಂಗಿ ಧರಿಸುತ್ತಿದ್ದ. ಮನೆಯ ಮಹಡಿ ಮೇಲೆ ಮೊಬೈಲ್ ನೋಡುತ್ತಾ ಕುಳಿತಿರುತ್ತಿದ್ದ. ಉಳಿದ ವೇಳೆಯಲ್ಲಿ ತನಗೆ ಅತ್ಯಂತ ಬೇಕಾದ ತನ್ನದೇ ಸಮುದಾಯದ ಒಂದೆರಡು ಸ್ಥಳಗಳಲ್ಲಿ ಮತ್ತು ಮಸೀದಿಯಲ್ಲಿ ಇರುತ್ತಿದ್ದ ಎಂದು ಹೇಳಲಾಗಿದೆ.