ಸಾರಾಂಶ
ಕಾರವಾರ: ಅಪ್ಪ ಒಂದು ಪಾರ್ಟಿ, ಮಗ ಒಂದು ಪಾರ್ಟಿಗೆ ಹೋಗುವುದಿದ್ದರೆ ಇಬ್ಬರೂ ಕೂಡಿ ಹೋಗಬೇಕು. ತನಗೆ ಎಂಎಲ್ಎ ಸ್ಥಾನ ಉಳಿಯಬೇಕು ಹಾಗೂ ಮಗ ಕಾಂಗ್ರೆಸ್ಸಿಗೆ ಹೋಗಬೇಕು ಎಂದರೆ ಹೇಗೆ ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಲೇವಡಿ ಮಾಡಿದರು.
ಶುಕ್ರವಾರ ನಾಮಪತ್ರ ಸಲ್ಲಿಕೆಗಾಗಿ ಕಾರವಾರಕ್ಕೆ ಆಗಮಿಸಿದ ಯತ್ನಾಳ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರೂಪಾಲಿ ನಾಯ್ಕ ಅವರು, ಬಿಜೆಪಿಯಿಂದ ದೂರ ಇದ್ದು ಕಾಂಗ್ರೆಸ್ ಗೆ ಹತ್ತಿರವಾಗಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಶಿವರಾಮ ಹೆಬ್ಬಾರ ನಾವು ಸ್ನೇಹಿತರು. ನಾನು ವಿಜಯಪುರದಲ್ಲಿ, ಅವರು ಉತ್ತರ ಕನ್ನಡದಲ್ಲಿ ಜಿಲ್ಲಾಧ್ಯಕ್ಷರಾಗಿದ್ದೆವು. ಅವರಿಗೆ ಕೇಳುತ್ತೇನೆ, ನರೇಂದ್ರ ಮೋದಿ ಬರಲಿಲ್ಲ ಎಂದರೆ ದೇಶ ಏನಾಗುತ್ತದೆ? ಎಂದು ಶಾಸಕ ಬಸನಗೌಡ ಪಾಟೀಲ ಪ್ರಶ್ನಿಸಿದರು.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ನೋಡಿದರೆ ಪಾಪ ಅನ್ನಿಸುತ್ತಿದೆ. ಮಾಡಬಾರದ್ದನ್ನು ಮಾಡಿದರೆ ರಾಜಕೀಯವಾಗಿ ಎಂತಹ ಸ್ಥಿತಿ ಅನುಭವಿಸಬೇಕಾಗಲಿದೆ ಎನ್ನುವುದನ್ನು ಹೆಬ್ಬಾರ್ ಅವರನ್ನೇ ನೋಡಿ ತಿಳಿಯಬೇಕು ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯವಾಡಿದರು.ಶಿವರಾಮ ಹೆಬ್ಬಾರ್ ನಡವಳಿಕೆ ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೆ ಶೋಭೆ ತರಲಾರದು. ಹೆಬ್ಬಾರ್ ಸ್ಪಷ್ಟ ನಿರ್ಧಾರ ಕೈಗೊಂಡು ನುಡಿದಂತೆ ನಡೆಯಬೇಕು, ನಡೆದಂತೆ ನುಡಿಬೇಕು. ಹೆಬ್ಬಾರ್ ಅವರ ದ್ವಂದ್ವ ನೀತಿ ಕ್ಷೇತ್ರದ ಮತದಾರರನ್ನು ಗೊಂದಲದಲ್ಲಿರಿಸಿದೆ. ಹೆಬ್ಬಾರ್ ನೀತಿ ಶೋಭೆ ತರುವಂತದ್ದಲ್ಲ ಎಂದರು.
ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಜನರು ಪ್ರಬುದ್ಧರಿದ್ದಾರೆ. ಹೆಬ್ಬಾರ್ ನಡವಳಿಕೆ ಜನರಿಗೆ ಬೇಸರವಾಗಿದೆ. ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜನರು ಅವರನ್ನು ಒಪ್ಪುವುದಿಲ್ಲ. ಅವರ ರಾಜಕೀಯ ಜೀವನ ಸಂಬಂಧಿಸಿದ ನಡವಳಿಕೆಯ ಬಗ್ಗೆ ಆ ಕ್ಷೇತ್ರದ ಜನರೇ ನಿರ್ಧರಿಸುತ್ತಾರೆ. ಹೆಬ್ಬಾರ್‌ಗೆ ಪಕ್ಷದಿಂದ ಏನೇನು ಸನ್ಮಾನ, ಸ್ಥಾನಮಾನ, ಗೌರವ, ಸಹಾಯ ಸಿಕ್ಕಿದೆ ಅಂತಾ ಹೆಬ್ಬಾರ್ ಬಳಿಯೇ ಕೇಳಿ ಎಂದು ಕಾಗೇರಿ ಹೇಳಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಅವರು, ಶಿವರಾಮ ಹೆಬ್ಬಾರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಬಿಜೆಪಿಯ ಶಾಸಕರಾಗಿ ತಮ್ಮ ಪುತ್ರನನ್ನು ಕಾಂಗ್ರೆಸ್ಸಿಗೆ ಕಳುಹಿಸಿ ತಾವು ಬಿಜೆಪಿಯಲ್ಲಿದ್ದು ನಾಟಕ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಏನು ಮಾಡಿದ್ದೆ, ಹೇಗಿದ್ದೆ, ಎಲ್ಲಿಂದ ಬಂದಿದ್ದೇನೆ ಅಂತಾ ಹೆಬ್ಬಾರ್ ಅವರಿಗೂ ಗೊತ್ತಿದೆ. ನನಗೂ ಗೊತ್ತಿದೆ. ಒಬ್ಬ ಮಹಿಳೆಗೆ ಬಹಳಷ್ಟು ಬಾರಿ ಮನಸ್ಸು ನೋಯಿಸುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಸಮಯದ ಬಂದಾಗ ಅವರಿಗೆ ಉತ್ತರ ಕೊಡುತ್ತೇನೆ ಎಂದರು.ತಮ್ಮನ್ನು ಸೋಲಿಸಲು ಎಷ್ಟೋ ಸಲ ಹೆಬ್ಬಾರ್ ಪ್ರಯತ್ನ ನಡೆಸಿದ್ದರು. ನನ್ನ ಸೋಲಿಗೆ ಯಾರೆಲ್ಲ ಪ್ರಯತ್ನ ನಡೆಸಿದ್ದಾರೆ ಎಂಬ ಬಗ್ಗೆ ಸಾಕ್ಷಿಗಳು ನನ್ನಲ್ಲಿವೆ. ನಾನು ಸೋತರೂ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಹೆಬ್ಬಾರ್ ಗೆದ್ದರೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದರು.
ಹೆಬ್ಬಾರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆಂಬುದಕ್ಕೆ ಬೇಜಾರಾಗಿದೆ, ಹೊರತು ವೈಯಕ್ತಿಕ ವಿಚಾರಕ್ಕೆ ಯಾವುದೇ ಬೇಜಾರಿಲ್ಲ ಎಂದು ರೂಪಾಲಿ ನಾಯ್ಕ ತಿಳಿಸಿದರು.