ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲವು: ನಳಿನ್‌ ಕುಮಾರ್‌ ಕಟೀಲ್‌

| Published : Apr 13 2024, 01:04 AM IST

ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲವು: ನಳಿನ್‌ ಕುಮಾರ್‌ ಕಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿನಲ್ಲಿ ರೋಡ್‌ಶೋ ಮೂಲಕ ಜನರ ಬಳಿಗೆ ಆಗಮಿಸಲಿದ್ದಾರೆ. ಈ ಬಾರಿ ಅಭೂತಪೂರ್ವ ಜನಸಾಗರದ ನಿರೀಕ್ಷೆ ಹೊಂದಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಆಡಳಿತದಿಂದಾಗಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲು ದೇಶವ್ಯಾಪಿ ಎನ್‌ಡಿಎ ಪರ ಅಲೆ ಇದೆ. ಕರ್ನಾಟಕದಲ್ಲೂ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಜಯಿಸಲಿದೆ ಎಂದು ದ.ಕ. ಸಂಸದ, ಕೇರಳ ಬಿಜೆಪಿ ಚುನಾವಣಾ ಸಹ ಪ್ರಭಾರಿ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರ ನಿಗ್ರಹ ಸೇರಿದಂತೆ ದೇಶದ ಹಲವು ಸಮಸ್ಯೆಗಳನ್ನು ಚಾಣಾಕ್ಷತನದಿಂದ ಎದುರಿಸಿದ ನರೇಂದ್ರ ಮೋದಿ ಅವರು, ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶದ ಜನತೆಯ ಕನಸು. ರಾಜ್ಯದಲ್ಲಿ ಕೂಡ ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನ ಹೀನಾಯ ಆಡಳಿತ, ಅಭಿವೃದ್ಧಿ ಕುಂಠಿತ ವ್ಯವಸ್ಥೆಯಿಂದ ಜನತೆ ರೋಸಿ ಹೋಗಿದೆ. ಭ್ರಷ್ಟಾಚಾರ ಮಿತಿಮೀರಿದ್ದು, ಗುತ್ತಿಗೆದಾರರರಿಗೆ ಬಿಲ್‌ ಪಾವತಿಗೆ ಹಣ ಇಲ್ಲ. ಶೇ.80ಕ್ಕೆ ಪರ್ಸಂಟೇಜ್‌ ತಲುಪಿದೆ ಎಂದು ಟೀಕಿಸಿದರು.

ಕೇರಳದಲ್ಲಿ 5 ಸ್ಥಾನ ಗೆಲ್ಲುತ್ತೇವೆ:

ಕೇರಳದಲ್ಲಿ ಈ ಬಾರಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. 2016ರಿಂದ 19ರ ವರೆಗೆ ನಾನು ಸಹ ಉಸ್ತುವಾರಿ ಆಗಿದ್ದೆ. ಆಗ 2 ಚುನಾವಣೆ, ಮೂರು ಪಾದಯಾತ್ರೆ ಕೈಗೊಳ್ಳಲಾಗಿತ್ತ. ಈ ಬಾರಿ ಯುವ ಜನತೆ ಹಾಗೂ ಕ್ರೈಸ್ತ ಸಮುದಾಯ ಮೋದಿ ಅವರತ್ತ ಒಲವು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಕನಿಷ್ಠ ಐದು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅಸಮಾಧಾನ ಶಮನ ಯತ್ನ:

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಅಸಮಾಧಾನವನ್ನು ಪಕ್ಷದ ರಾಷ್ಟ್ರೀಯ ನಾಯಕರು ಪರಿಹರಿಸುತ್ತಾರೆ. ಈಶ್ವರಪ್ಪ ಅವರು ಪಕ್ಷದ ಹಿರಿಯರಾಗಿದ್ದು, ಪಕ್ಷದ ಬಗ್ಗೆ ಅಪಾರ ಗೌರವ ಇರುವವರು. ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರಶ್ರೀಗಳು ಸ್ಪರ್ಧೆಗೆ ಹಕ್ಕು ಪ್ರತಿಪಾದಿಸಿರುವುದು ತಪ್ಪಲ್ಲ ಎಂದು ನಳಿನ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಸುದರ್ಶನ್‌ ಎಂ., ಕಸ್ತೂರಿ ಪಂಜ, ನಿತಿನ್‌ ಕುಮಾರ್‌, ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಕಿಶೋರ್‌ ಕುಮಾರ್‌ ಬೊಟ್ಯಾಡಿ, ಸುಧೀರ್‌ ಶೆಟ್ಟಿ ಕಣ್ಣೂರು, ಯತೀಶ್ ಆರ್ವಾರ್‌ ಇದ್ದರು.

14ರಂದು ಮಂಗಳೂರಲ್ಲಿ ಮೋದಿ ಜನರ ಬಳಿಗೆ

ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿನಲ್ಲಿ ರೋಡ್‌ಶೋ ಮೂಲಕ ಜನರ ಬಳಿಗೆ ಆಗಮಿಸಲಿದ್ದಾರೆ. ಈ ಬಾರಿ ಅಭೂತಪೂರ್ವ ಜನಸಾಗರದ ನಿರೀಕ್ಷೆ ಹೊಂದಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಈ ಹಿಂದೆ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಮೋದಿ ಅವರಿಗೆ ಮಂಗಳೂರು ಎಂದರೆ ಪ್ರೀತಿ. ಹಾಗಾಗಿ ಅವರ ಸೂಚನೆ ಮೇರೆಗೆ ರೋಡ್‌ ಶೋ ನಡೆಸಲಾಗುತ್ತಿದೆ. ಈ ರೋಡ್‌ಶೋ ವೇಳೆ 10 ಕಡೆಗಳಲ್ಲಿ ಕರಾವಳಿಯ ಜಾನಪದ ಸಂಸ್ಕೃತಿ ಅನಾವರಣಗೊಳಿಸುವ ಕಾರ್ಯ ನಡೆಯಲಿದೆ ಎಂದರು.