ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಕೆಲವರು ಬೀದಿಗಿಳಿದು ಸಹಾಯ ಮಾಡುವಂತೆ ಡಬ್ಬಿ ಹಿಡಿದು ಪಟ್ಟಣದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹಿಸುತ್ತಿರುವುದನ್ನು ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ತೀವ್ರವಾಗಿ ಖಂಡಿಸಿದರು.ಪಟ್ಟಣದ ಹೃದಯ ಭಾಗದಲ್ಲಿ ಕೆಪಿಎಸ್ ಶಾಲೆಯಲ್ಲಿ ಮಕ್ಕಳ ಮನೆಯಿಂದ ಪಿಯುಸಿವರೆಗೆ 2400ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ರಾಜ್ಯ ಸರ್ಕಾರ ಶೌಚಾಲಯ ಸ್ವಚ್ಛತೆ ಸೇರಿದಂತೆ ಯಾವುದೇ ಮೂಲ ಸೌಲಭ್ಯಕ್ಕೆ ಅಗತ್ಯ ಹಣಕಸಿನ ನೆರವು ನೀಡುತ್ತಿಲ್ಲ.
ಪಟ್ಟಣದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿರುವ ಸರ್ಕಾರಿ ಕೆಪಿಎಸ್ ಶಾಲೆಯನ್ನು ಉಳಿಸಿ-ಬೆಳೆಸಲು ಪೋಷಕರು ಸ್ವಯಂ ಪ್ರೇರಣೆಯಿಂದ ಶಾಲೆಗೆ ದೇಣಿಗೆ ನೀಡುತ್ತಿದ್ದಾರೆ. ಪೋಷಕರಿಂದ ಶಾಲೆ ಸೌಕರ್ಯಗಳಿಗೆ ಹಣ ಪಡೆಯುವುದನ್ನು ವಿರೋಧಿಸಿ ಕೆಲವರು ಸಾರ್ವಜನಿಕರಿಂದ ಭಿಕ್ಷೆ ಬೇಡಿ ನೀಡುತ್ತೇವೆಂದು ಹೇಳಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿಕೊಂಡು ಕನ್ನಡ ಪರ ಸಂಘಟನೆ ಮುಖಂಡ ಅಗ್ರಹಾರಬಾಚಹಳ್ಳಿ ಕಾಂತರಾಜು ನೇತೃತ್ವದಲ್ಲಿ ಪಟ್ಟಣದಲ್ಲಿಡಬ್ಬಿ ಹಿಡಿದು ಭಿಕ್ಷಾಟನೆ ಆರಂಭಿಸಿದರು.ಇದಕ್ಕೆ ಪ್ರತಿಯಾಗಿ ಬ್ಯಾನರ್ ಹಿಡಿದ ಪೋಷಕರ ಗುಂಪು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಬಿ.ಚೇತನ್ ಕುಮಾರ್ ನೇತೃತ್ವದಲ್ಲಿ ಬೀದಿಗಿಳಿದು ಭಿಕ್ಷಾಟನೆ ಹೆಸರಿನಲ್ಲಿ ಪ್ರತಿಷ್ಠಿತ ಶಾಲೆಗೆ ಕಪ್ಪು ಮಸಿ ಬಳಿಯುತ್ತಿರುವುದನ್ನು ಖಂಡಿಸಿದರು.
ಇತ್ತೀಚೆಗೆ ಕೆಲವರು ಪ್ರತಿವರ್ಷ ಕೆಪಿಎಸ್ ಶಾಲೆ ಪೋಷಕರಿಂದ ಹಣ ಪಡೆಯುವುದನ್ನು ವಿರೋಧಿಸಿ ಶಾಲೆ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಸರ್ಕಾರ ಅಗತ್ಯ ಮೂಲ ಸೌಕರ್ಯ ಒದಗಿಸಿದ್ದರೆ ಪೋಷಕರು ಸ್ವಯಂ ಪ್ರೇರಣೆಯಿಂದ ಧನ ಸಹಾಯ ಮಾಡಿ ಶಾಲೆ ಉಳಿವಿಗೆ ಮುಂದಾಗುತ್ತಿರಲ್ಲಿಲ್ಲ ಎಂದರು.
ಶಾಲೆ ವಿರುದ್ಧ ಅಪಪ್ರಚಾರ ಮಾಡುವುದರ ಬದಲು ಹಣದ ಸದ್ಬಳಕೆಯ ಬಗ್ಗೆ ಪರಿಶೀಲನೆ ಮಾಡಲಿ. ಮಕ್ಕಳ ಮನೆಯಿಂದ ಹಿಡಿದು ಪಿಯುಸಿ ವರೆಗೆ ಹೆಮ್ಮರವಾಗಿ ಬೆಳೆಯುತ್ತಿರುವ ಕೆಪಿಎಸ್ ಶಾಲೆ ಮುಳುಗಿಸಲು ಕೆಲವರು ಶಾಲೆ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆ ವಿರುದ್ದ ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು. ತಮ್ಮ ಮಕ್ಕಳ ಹಿತರಕ್ಷಣೆಗೆ ಪೋಷಕರು ಸ್ವಯಂ ಪ್ರೇರಿತರಾಗಿ ಹಣ ನೀಡುತ್ತಿದ್ದಾರೆ. ಇದಕ್ಕಾಗಿ ಮಕ್ಕಳ ಪೋಷಕರಿಂದಲೇ ಆಯ್ಕೆಯಾದ ಶಾಲಾಭಿವೃದ್ಧಿ ಸಮಿತಿಯಿದೆ. ಸರ್ಕಾರಿ ಶಾಲೆ ಮುಚ್ಚಿದರೆ ಪಟ್ಟಣದ ಬಡವರ ಮಕ್ಕಳು ದುಬಾರಿ ಹಣಕೊಟ್ಟು ಖಾಸಗಿ ಸಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲಾಗುವುದಿಲ್ಲ ಎಂದರು.ಶಾಲಾಭಿವೃದ್ಧಿಗೆ ಹಣ ವಸೂಲಾತಿ ಮತ್ತು ಭಿಕ್ಷಾಟನೆ ಸಂಬಂಧ ಪೋಷಕರು ಮತ್ತು ಭಿಕ್ಷಾಟನೆಕಾರರು ಮುಖಾಮುಖಿಯಾದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮಧ್ಯ ಪ್ರವೇಶಿಸಿದ ಪಟ್ಟಣ ಪೊಲೀಸರು ಪರಿಸ್ಥಿಯನ್ನು ತಿಳಿಗೊಳಿಸಿದರು.