ಸಾರಾಂಶ
ಹೊನ್ನಾವರ: ಸಾಮಾನ್ಯ ಮಕ್ಕಳಿಗಿಂತಲೂ ಭಿನ್ನವಾಗಿರುವ ವಿಶೇಷ ಮಕ್ಕಳು ಹುಟ್ಟುವಾಗ ಯಾವುದೋ ತೊಂದರೆಯಿಂದ ವಿಕಲಾಂಗರಾಗಿ ಹುಟ್ಟುತ್ತಾರೆ. ಅವರನ್ನು ಪ್ರೀತಿ, ವಿಶ್ವಾಸದಿಂದ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್. ನಾಯ್ಕ ಹೇಳಿದರು.
ಅವರು ಇಂದು ಹೊನ್ನಾವರದ ಪೆದ್ರು ಪೊವೇಡಾ ವಿಶೇಷ ಶಾಲೆಯಲ್ಲಿ ಪಟ್ಟಣದ ನಂಬರ್ -2 ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ "ತಣ್ಣೀರು " ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗವಿಕಲತೆ ಎನ್ನುವುದು ಆಕಸ್ಮಿಕ. ಬಲಹೀನತೆಯಲ್ಲೂ ಬಲ ತೋರಿಸುವ ಕೆಲಸ ಪಾಲಕರಿಂದ ಸಾಧ್ಯವಾದಾಗ ಮಾತ್ರ ಅಂತ ಮಕ್ಕಳು ವಿಶೇಷ ಸಾಧನೆ ಮಾಡಲು ಸಾಧ್ಯ ಎಂದರು.ಮುಖ್ಯ ಅತಿಥಿಯಾಗಿ ಕ್ಷೇತ್ರ ಸಮನ್ವಯಾಧಿಕಾರಿ ವಿನಾಯಕ ಅವಧಾನಿ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ ರಚಿಸಿದ ನಾಟಕ ಪಾಲಕರಲ್ಲಿ ಜಾಗೃತಿ ಮೂಡಿಸುವ ಬಹು ಮುಖ್ಯ ಸಾಧನವಾಗಿದೆ ಎಂದು ಶ್ಲಾಘಿಸಿದರು. ಇತರ ಮಕ್ಕಳಂತೆ ಮುಖ್ಯ ವಾಹಿನಿಗೆ ತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ ವಿಶೇಷ ಅಗತ್ಯವುಳ್ಳ ಮಕ್ಕಳು ನಮ್ಮ ಮಕ್ಕಳಂತೆ. ಅವರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಪ್ರೀತಿಸುವ ಮನಸ್ಸಿನಿಂದ ಅವರನ್ನು ಗೆಲ್ಲಲು ಸಾಧ್ಯ. ವಿಶೇಷ ಅಗತ್ಯವುಳ್ಳ ಮಕ್ಕಳ ಸಾಧನೆ ಉಳಿದೆಲ್ಲ ಮಕ್ಕಳ ಸಾಧನೆಗಳಿಗಿಂತ ಮಿಗಿಲಾದುದು ಎಂದರು.ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ನಾವಿದ್ದೇವೆ ಎಂಬ ಆತ್ಮ ಬಲವೇ ಅವರನ್ನು ಗೆಲ್ಲುವ ಸಾಧನ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಪಾಲಿನ ಆರಾಧ್ಯ ಸ್ಥಳವಾಗಿ ಸೇವಾ ಮನೋಭಾವದಿಂದ ದುಡಿಯುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ತಣ್ಣೀರು ನಾಟಕದ ಕರ್ತೃ ಪಿ.ಆರ್. ನಾಯ್ಕ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಶೇಟ್, ಶಿಕ್ಷಕಿ ಪ್ಲಾವಿಯಾ ಮೆಂಡೋಸ್, ಪ್ರಮೀಳಾ ಡಿಸೋಜ, ಎಲಿಜಬೇತ ಫರ್ನಾಂಡಿಸ್, ಲೂಸಿ ಕರವಾಲೊ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಪೆದ್ರು ಪೊವೇಡಾ ವಿಶೇಷ ಶಾಲೆಯ ಪ್ರಾಂಶುಪಾಲೆ ಪ್ಲಾವೀಯಾ ಗೊನ್ಸಾಲ್ವಿಸ್ ವರದಿ ವಾಚಿಸಿದರು. ಶಿಕ್ಷಕಿ ಪ್ರಮೀಳಾ ಡಿಸೋಜಾ ಸ್ವಾಗತಿಸಿದರು, ಕೊನೆಯಲ್ಲಿ ಲೂವೇಜಿನ್ ಪಿಂಟೊ ವಂದಿಸಿದರು. ವಿಶೇಷ ಅಗತ್ಯವುಳ್ಳ ಮಕ್ಕಳಿಂದ ನೃತ್ಯ ಪ್ರದರ್ಶಿಸಲಾಯಿತು. ಪಟ್ಟಣದ ನಂಬರ್ -2 ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ತಣ್ಣೀರು ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತ ನಾಟಕ ಪ್ರದರ್ಶಿಸಲಾಯಿತು.