ಸಾರಾಂಶ
ಹಲಗೇರಿ ಗ್ರಾಮ ಕನ್ನಡ ಕಟ್ಟಲು ಸಾಕಷ್ಟು ಕೊಡುಗೆ ನೀಡಿದೆ. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಸೇವೆ ಮಾಡಿರುವ ಕೀರ್ತಿ ಈ ಗ್ರಾಮಕ್ಕಿದೆ.
ಕೊಪ್ಪಳ:
ತಾಲೂಕಿನ ಹಲಗೇರಿಯಲ್ಲಿ ಮಾ. 23ರಂದು ಕೊಪ್ಪಳ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ಆಚರಿಸಲು ನಿರ್ಧರಿಸಲಾಗಿದೆ.ಗುರುವಾರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಕಂದಾಯ ನಿರೀಕ್ಷಕ ಮಂಜುನಾಥ, ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಮಾತನಾಡಿ, ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಆಗಮಿಸಲಿದ್ದು, ಅವರ ಆತಿಥ್ಯಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಸಮ್ಮೇಳನ ಹಲಗೇರಿ ಗ್ರಾಮದಲ್ಲಿ ಜರುಗಬೇಕೆಂಬುದು ಕನ್ನಡ ಕಟ್ಟಾಳು ದಿ. ರಾಜಶೇಖರ ಅಂಗಡಿ ಅವರ ಕನಸಾಗಿತ್ತು. ಸಮ್ಮೇಳನ ಯಶಸ್ವಿಗೊಳಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಸಂತೋಷ ದೇಶಪಾಂಡೆ ಮಾತನಾಡಿ, ಹಲಗೇರಿ ಗ್ರಾಮ ಕನ್ನಡ ಕಟ್ಟಲು ಸಾಕಷ್ಟು ಕೊಡುಗೆ ನೀಡಿದೆ. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಸೇವೆ ಮಾಡಿರುವ ಕೀರ್ತಿ ಈ ಗ್ರಾಮಕ್ಕಿದೆ. ಇಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲು ಸ್ಥಳೀಯರ ಸಹಕಾರ ಬಹಳ ಮುಖ್ಯ ಎಂದರು.ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ್ ಮಾತನಾಡಿ, ಸಮ್ಮೇಳನದ ಆತಿಥ್ಯ ವಹಿಸಿ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ಧ ಕಸಾಪ ಅಧ್ಯಕ್ಷ ರಾಮಚಂದ್ರ ಗೋಡಬಾಳ, ೧೦ನೇ ಸಮ್ಮೇಳನ ಹಲಗೇರಿ ಗ್ರಾಮದಲ್ಲಿ ಆಚರಿಸಲು ಆಹ್ವಾನ ನೀಡಿದರು. ಗ್ರಾಮಸ್ಥರಿಗೆ ಪರಿಷತ್ ಪರವಾಗಿ ಧನ್ಯವಾದ, ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿ ರಚಿಸಿ ಶ್ರಮಿಸಲಾಗುವುದು ಎಂದರು.ಕರಿಯಪ್ಪ ಹಳ್ಳಿಕೇರಿ, ಪತ್ರಕರ್ತ ಅನಿಲ್ ಬಾಚನಹಳ್ಳಿ, ಹಲಗೇರಿ, ವದಗನಾಳ ಹಾಗೂ ಹಣವಾಳ ಗ್ರಾಮದ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು, ಯುವಕರ, ಗ್ರಾಪಂ ಕಾರ್ಯಾಲಯ, ಎಸ್‌ಡಿಎಂಸಿ ಅಧ್ಯಕ್ಷರು, ವಿವಿಧ ಸಂಘ-ಸಂಸ್ಥೆಯ ನೇತೃತ್ವದಲ್ಲಿ ಸಭೆ ನಡೆಯಿತು.