ಸಾರಿಗೆ ಮುಷ್ಕರಕ್ಕೆ ಪ್ರಯಾಣಿಕರಿಗೆ ತಟ್ಟಿದ ಬಿಸಿ

| Published : Aug 06 2025, 01:30 AM IST

ಸಾರಿಗೆ ಮುಷ್ಕರಕ್ಕೆ ಪ್ರಯಾಣಿಕರಿಗೆ ತಟ್ಟಿದ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದೆ. ಶೇ.30ರಷ್ಟು ಬಸ್‌ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ. ಬಸ್‌ಗಾಗಿ ಪ್ರಯಾಣಿಕರು ಪರದಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದೆ. ಶೇ.30ರಷ್ಟು ಬಸ್‌ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ. ಬಸ್‌ಗಾಗಿ ಪ್ರಯಾಣಿಕರು ಪರದಾಡಿದರು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಹಳಷ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಶೇ.10ರಷ್ಟು ಬಸ್ ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದವು. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಸೇರಿ ಹಿರಿಯ ಅಧಿಕಾರಿಗಳು ಚಾಲಕ, ನಿರ್ವಾಹಕರನ್ನು ಮನವಲಿಸಿದ ಪರಿಣಾಮ ಸದ್ಯ ಶೇ.30ರಷ್ಟು ಬಸ್‌ಗಳು ಓಡಾಡಲು ಆರಂಭಿಸಿದವು. ಬೆಳಗಾವಿ ವಿಭಾಗದಲ್ಲಿ ನಿತ್ಯ 700ಕ್ಕೂ ಅಧಿಕ, ಚಿಕ್ಕೋಡಿ ವಿಭಾಗದಲ್ಲಿ 668 ಬಸ್‌ಗಳ ಓಡಾಟ ಇತ್ತು. ಎರಡು ಕಡೆಗಳಲ್ಲಿ 4300 ಕ್ಕೂ ಅಧಿಕ ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಎರಡೂ ಕಡೆ ಶೇ.30ರಷ್ಟು ಮಾತ್ರ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಂದಿಷ್ಟು ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಸುಮ್ಮನೆ ನಿಂತಿದ್ದಾರೆ.ಬಹುತೇಕ ಪ್ರಯಾಣಿಕರು 2 ಗಂಟೆಗೂ ಅಧಿಕ ಕಾಲ ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಸಿಟಿ ಬಸ್, ಗ್ರಾಮೀಣ ಪ್ರದೇಶ, ಅಂತರ ಜಿಲ್ಲೆ, ಅಂತರ ರಾಜ್ಯಗಳಿಗೆ ಬೆರಳಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಗೋವಾ, ಮಹಾರಾಷ್ಟ್ರ ಸೇರಿ ಅಂತರ ಜಿಲ್ಲೆಗೆ ಹೋಗುವ ಪ್ರಯಾಣಿಕರು ಪರದಾಡಿದರು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ನೀಡಿ, ಭದ್ರತೆ ಪರಿಶೀಲಿಸಿದರು.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿ ಗ್ಯಾರಂಟಿ ಯೋಜನೆ ಕೊಡಬಾರದಿತ್ತು. ಇದರಿಂದಾಗಿಯೇ ಈ ಪರಿಸ್ಥಿತಿ ಉದ್ಭವಿಸಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರ ಸರಿ ಇಲ್ಲ. ತಕ್ಷಣ ಗ್ಯಾರಂಟಿಗಳನ್ನು ಬಂದ್ ಮಾಡಬೇಕು. ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು.

-ಅವಿನಾಶ, ದಾಂಡೇಲಿಗೆ ಹೋಗುತ್ತಿದ್ದ ಪ್ರಯಾಣಿಕ.ನಾನು ಬೈಲಹೊಂಗಲಕ್ಕೆ ಹೋಗಬೇಕು. ಕಳೆದ ಒಂದು ಗಂಟೆಯಿಂದ ಬಸ್ ಬಿಡುತ್ತಿಲ್ಲ. ಬೇರೆ ಕಡೆ ಬಸ್ ಬಿಡುತ್ತಿದ್ದರು. ಹಾಗಾಗಿ, ಬಂದೆ. ಇಲ್ಲಿ ನೋಡಿದರೆ ಬಸ್ ಬಿಡಲ್ಲ ಅಂತೀದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಾರಿಗೆ ನೌಕರರ ಬೇಡಿಕೆ ಈಡೇರುವ ಕೆಲಸ ಮಾಡಬೇಕು. ಜನರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು.

-ರಶ್ಮಿ,

ಪ್ರಯಾಣಕಿ.ನಮ್ಮದು ಉಚಗಾಂವ, ನಾನು ನಮ್ಮ ತವರೂರು ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುತ್ತಿದ್ದಾರೆ. ಅದಕ್ಕೆ ಹೋಗುತ್ತಿದ್ದೇವು‌‌. ಈ ಮುಷ್ಕರದ ಬಗ್ಗೆ ನಮಗೆ ಗೊತ್ತಿರಲಿಲ್ಲ. ನಮಗೆ ಬಸ್ ವ್ಯವಸ್ಥೆ ಮಾಡಿದರೆ ಅನುಕೂಲ ಆಗುತ್ತದೆ.

-ಜಾನಕಿ ತೋರೆ,
ಪ್ರಯಾಣಕಿ.ಅಥಣಿಗೆ ಹೋಗುತ್ತಿದ್ದೇನೆ ಬಸ್ ಬಿಡುತ್ತಿಲ್ಲ. ಇದರಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ. ಬಸ್ ಬಿಡದಿದ್ದರೆ ಇಲ್ಲಿಯೇ ರೂಮ್ ಮಾಡಿ ಉಳಿದುಕೊಳ್ಳಬೇಕಾಗುತ್ತದೆ.

ವಿಜಯ,

ಪ್ರಯಾಣಿಕ.ಬೆಳಗ್ಗೆ ನಮ್ಮ ಡಿಪೋದಿಂದ ಶೇ.35ರಷ್ಟು ಬಸ್‌ಗಳು ಹೊರಗೆ ಬಿಡಲಾಗಿದೆ. ಅದೇರೀತಿ ನಿನ್ನೆ ಮಧ್ಯಾಹ್ನದ ಬಸ್ ಗಳು ಇಂದು ಮಧ್ಯಾಹ್ನವರೆಗೆ ಓಡಾಡಲಿವೆ. ನಮ್ಮ ಆರು ಘಟಕದ 300 ಬಸ್‌ಗಳು ಸಂಚರಿಸುತ್ತಿವೆ. ಎಲ್ಲೆಲ್ಲಿ ಹೆಚ್ಚು ಜನರು ಹೋಗುತ್ತಿದ್ದಾರೋ, ಅಲ್ಲೆಲ್ಲಾ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕಳೆದ 3 ದಿನಗಳಿಂದ ನಮ್ಮ ಸಿಬ್ಬಂದಿ ಜೊತೆ ಮಾತನಾಡಿದ್ದು, ಕರ್ತವ್ಯಕ್ಕೆ ಬರುವಂತೆ ಕೋರಿದ್ದೇವೆ. ಇನ್ನು ಒತ್ತಾಯಪೂರ್ವಕವಾಗಿ ಬಸ್ ಕಾರ್ಯಾಚರಣೆ ತಡೆಯುವುದು ಕಂಡು ಬಂದರೇ ಅಂತವರ ವಿರುದ್ಧ ಎಸ್ಮಾ ಕಾಯ್ದೆಯಡಿ ಕ್ರಮ ವಹಿಸುತ್ತೇವೆ. ಇಲ್ಲಿಯವರೆಗೆ ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ.

-ರಾಜೇಶ ಹುದ್ದಾರ,
ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ.

ಬೆಳಗಾವಿ ನಗರದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದ್ದೇನೆ. ಶೇ‌. 30ರಷ್ಟು ಬಸ್ ಓಡಾಡುತ್ತಿದೆ. ಸಿಟಿ ವ್ಯಾಪ್ತಿಯಲ್ಲಿ ಸೂಕ್ತ ರಕ್ಷಣೆ ನೀಡುತ್ತೇನೆ. ಆಟೋ, ಖಾಸಗಿ ವಾಹನಗಳು ದರ ಹೆಚ್ಚಳ ಮಾಡಬಾರದು. ದರ ಹೆಚ್ಚು ಮಾಡಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.

-ಭೂಷಣ್ ಬೊರಸೆ, ನಗರ ಪೊಲೀಸ್ ಆಯುಕ್ತ.