ಸಾರಾಂಶ
ಪತಂಜಲಿಯ ಉತ್ಪನ್ನಗಳು ಹಾಗೂ ಚಿಕಿತ್ಸಾ ಕ್ರಮಗಳು ದೀರ್ಘಕಾಲಿನ ಸಂಶೋಧನೆಯ ಪ್ರತಿಫಲವಾಗಿವೆ. ನಮ್ಮ ಸಂಶೋಧನೆಗಳು ಸೂಕ್ತ ಪುರಾವೆ ಹೊಂದಿವೆ. ಸಾವಿರಾರು ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.
ಹುಬ್ಬಳ್ಳಿ:
ಯೋಗ, ಆಯುರ್ವೇದ ಹಾಗೂ ಪತಂಜಲಿ ಉತ್ಪನ್ನಗಳ ಮೂಲಕ ಹಲವಾರು ಕಾಯಿಲೆ ಗುಣಪಡಿಸಲಾಗಿದೆ ಎಂದಿರುವ ಪತಂಜಲಿ ಯೋಗಪೀಠದ ಸಂಸ್ಥಾಪಕ ಯೋಗ ಗುರು ಬಾಬಾ ರಾಮದೇವ್, ಪತಂಜಲಿ ಸಂಶೋಧನೆಗಳಿಗೆ ಸೂಕ್ತ ಪುರಾವೆ ಇವೆ ಎಂದು ಹೇಳಿದರು.ನಗರದ ಪತಂಜಲಿ ವೆಲ್‌ನೆಸ್ ಸೆಂಟರ್‌ಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತಂಜಲಿಯ ಉತ್ಪನ್ನಗಳು ಹಾಗೂ ಚಿಕಿತ್ಸಾ ಕ್ರಮಗಳು ದೀರ್ಘಕಾಲಿನ ಸಂಶೋಧನೆಯ ಪ್ರತಿಫಲವಾಗಿವೆ. ನಮ್ಮ ಸಂಶೋಧನೆಗಳು ಸೂಕ್ತ ಪುರಾವೆ ಹೊಂದಿವೆ. ಸಾವಿರಾರು ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಮಧುಮೇಹ, ರಕ್ತದೊತ್ತಡ, ಅಸ್ತಮಾ, ಥೈರಾಯ್ಡ, ಕೊಬ್ಬು ಇತ್ಯಾದಿ ಸಮಸ್ಯೆಗಳಿಗೆ ಜನರು ದೀರ್ಘ ಕಾಲದವರೆಗೆ ಔಷಧಿಗಳು ಸೇವಿಸುತ್ತಾರೆ. ನಮ್ಮಲ್ಲಿ ಬಂದಲ್ಲಿ 1-2 ವಾರಗಳಲ್ಲಿ ಔಷಧಿ ಸೇವನೆ ಬಂದ್ ಮಾಡಿಸುತ್ತೇವೆ. ಇಲ್ಲಿಯ ಪತಂಜಲಿ ವೆಲ್‌ನೆಸ್ ಸೆಂಟರ್ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿಯಾಗಬೇಕು ಎಂದರು.
ಆಚಾರ್ಯ ಬಾಲಕೃಷ್ಣ ಮಾತನಾಡಿ, ಪತಂಜಲಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿಸುವಲ್ಲಿ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪತಂಜಲಿಯ 14 ಉತ್ಪನ್ನಗಳು ಬ್ಯಾನ್ ಆಗಿಲ್ಲ. ಅದರ ಜಾಹೀರಾತಿಗೆ ಸಂಬಂಧಿಸಿದಂತೆ ಕೋಟ್‌ರ್ನಲ್ಲಿ ವ್ಯಾಜ್ಯವಿದೆ. ನಾವು ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.ಯೋಗ ಗುರು ಬಾಬಾ ರಾಮದೇವ ಹಾಗೂ ಆಚಾರ್ಯ ಬಾಲಕೃಷ್ಣ ಅವರನ್ನು ಪತಂಜಲಿ ವೆಲ್‌ನೆಸ್ ಸೆಂಟರ್‌ನ ರಮೇಶ ಬಾಫಣಾ ಸನ್ಮಾನಿಸಿ, ಗೌರವಿಸಿದರು. ಯೋಗ ಗುರು ಭವರಲಾಲ ಆರ್ಯ, ಮುಕೇಶ ಬಾಫಣಾ, ಶ್ರೀಪಾದ ಬಾಫಣಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.