ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಮನಸ್ಸುಗಳಿಗೆ ಅಪರ್ಣಾ ನಿರೂಪಣೆಯಿಂದಲೇ ಮೋಡಿ ಮಾಡಿ ಜನಮನ ಸೆಳೆದಿದ್ದರು ಎಂದು ಅಸೋಷಿಯೇಷನ್ ಆಫ್ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು. ನಗರದಲ್ಲಿರುವ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್ಸ್ ಆಯೋಜಿಸಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ನಿರೂಪಣೆಗೆ ಹೊಸ ಮೆರುಗು ತಂದುಕೊಟ್ಟಿದ್ದ ಅಪರ್ಣಾ ಇನ್ನು ನೆನಪು ಮಾತ್ರ. ನಾಡಿನ ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದ, ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ನಿಧನರಾಗಿರುವುದು ತುಂಬಲಾರದ ನಷ್ಟವಾಗಿದೆ. ಕನ್ನಡ ಭಾಷೆಯನ್ನು ಅತ್ಯಂತ ಸ್ಫುಟವಾಗಿ ಮಾತನಾಡುತ್ತಿದ್ದ ಅಪರ್ಣಾ ಅವರ ನಿರೂಪಣೆಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಎಂದು ನುಡಿದರು.
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ೫೮ ವರ್ಷಕ್ಕೆ ಅಗಲಿರುವುದು ನೋವು ತರುತ್ತಿದೆ, ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣಾ ಅವರು, ತಮ್ಮ ಸುಮಧುರ ಮಾತುಗಳಿಂದಲೇ ಕನ್ನಡಿಗರ ಮನೆ ಮಾತಾಗಿದ್ದರು ಎಂದು ಸ್ಮರಿಸಿದರು.೧೯೮೪ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಸಿನಿಮಾದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಅಪರ್ಣಾ ಪ್ರವೇಶಿಸಿದ್ದರು ಎಂದು ತಿಳಿಸಿದರು.
ಆನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸವೀರ, ಒಂಟಿಸಲಗ, ಇನ್ಸ್‌ಪೆಕ್ಟರ್ ವಿಕ್ರಂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ೨೦೦೩ರಲ್ಲಿ ಪ್ರಸಾರವಾಗುತ್ತಿದ್ದ ಮೂಡಲ ಮನೆ, ಮುಕ್ತ ಧಾರಾವಾಹಿಗಳಲ್ಲಿ ಅಪರ್ಣಾ ಬಣ್ಣ ಹಚ್ಚಿದ್ದರು. ಬಳಿಕ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದಿದ್ದ ಅಪರ್ಣಾ, ಈಚೆಗಷ್ಟೇ ತೆರೆಕಂಡ ‘ಗ್ರೇ ಗೇಮ್ಸ್’ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು ಎಂದು ಹೇಳಿದರು.ಬಳಿಕ ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಅಪರ್ಣಾ ಅವರು ಸಾಕಷ್ಟು ಬಾರಿ ಮಂಡ್ಯಕ್ಕೂ ಬಂದು ನಿರೂಪಣೆ ಮಾಡಿದ್ದರು, ರಾಜ್ಯ ಸರ್ಕಾರದ ಪ್ರಾಯೋಜಿತ ಪ್ರಮುಖ ಕಾರ್ಯಕ್ರಮಗಳನ್ನು ಬಹುಪಾಲು ಅವರೇ ನಿರೂಪಿಸುತ್ತಿದ್ದರು ಎಂದು ನುಡಿದರು.
ಶಂಕರ್ ಪ್ರಕಾಶ್- ಅಪರ್ಣಾ ನಿರೂಪಕ ಜೋಡಿ ಕಂಠಸಿರಿ ಕನ್ನಡಿಗರ ಮನಗೆದ್ದಿತ್ತು. ಇಂಗ್ಲೀಷ್ ಪದಗಳನ್ನು ಬಳಸದೇ ಅಪ್ಪಟ ಕನ್ನಡದಲ್ಲೇ ಕಾರ್ಯಕ್ರಮ ನಿರೂಪಿಸುತ್ತಿದ್ದುದು ಅಪರ್ಣಾ ನಿರೂಪಣಾ ಶೈಲಿಯ ವಿಶೇಷವಾಗಿತ್ತು. ಈ ಕಾರಣಕ್ಕಾಗಿಯೇ ಅವರು ಕನ್ನಡಿಗರ ಮನಗೆದ್ದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಅವರು ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು ಎಂದು ವಿಷಾಧಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಲಿಂಗಣ್ಣ ಬಂದೂಕರ್, ಸಾಹಿತಿ ರಾಮಣ್ಣ, ಮುಖಂಡರಾದ ಮಂಜುಳಾ, ಲೋಕೇಶ್, ರಾಜೇಶ್, ಅಪ್ಪಾಜಿ ಮತ್ತಿತರರಿದ್ದರು.