ಸಾರಾಂಶ
ಆನ್‌ಲೈನ್‌ನಲ್ಲಿ ನಡೆಯುವ ಗಣತಿ ವೇಳೆ ಜಾಗರೂಕರಾಗಿ ಕೆಲಸ ಮಾಡಬೇಕು. ಗಣತಿಕ್ಕೊಳಪಡುವ ವ್ಯಕ್ತಿಯ ಆಧಾರ್ ಕಾರ್ಡ್‌ನಲ್ಲಿ ತಾವು ಬಳಸುವ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಕೊಂಡಿರಬೇಕು. ಪ್ರತಿ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
ಕನಕಗಿರಿ:
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಗಣತಿ ಕುರಿತು ಗಣತಿದಾರರಿಗೆ ತರಬೇತಿ ನೀಡಲಾಯಿತು.ತರಬೇತಿ ನೀಡಿದ ಶಿವಪುತ್ರಪ್ಪ ಗಳಪೂಜೆ, ಮನೆ-ಮನೆಗೆ ತೆರಳುವ ಗಣತಿದಾರರು ಒಟ್ಟು 60 ಪ್ರಶ್ನೆಗಳ ಮಾಲಿಕೆ ಭರ್ತಿ ಮಾಡಬೇಕು. ಇದರಲ್ಲಿ 20 ಪ್ರಶ್ನೆಗಳು ಕುಟುಂಬಕ್ಕೆ ಸಂಬಂಧಿಸಿದ್ದಾಗಿದ್ದು, ಇನ್ನುಳಿದ 40 ಪ್ರಶ್ನೆ ವ್ಯಕ್ತಿಗತವಾಗಿರುತ್ತವೆ. ಆನ್‌ಲೈನ್‌ನಲ್ಲಿ ನಡೆಯುವ ಗಣತಿ ವೇಳೆ ಜಾಗರೂಕರಾಗಿ ಕೆಲಸ ಮಾಡಬೇಕು. ಗಣತಿಕ್ಕೊಳಪಡುವ ವ್ಯಕ್ತಿಯ ಆಧಾರ್ ಕಾರ್ಡ್‌ನಲ್ಲಿ ತಾವು ಬಳಸುವ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಕೊಂಡಿರಬೇಕು. ಪ್ರತಿ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು ಎಂದರು.
ತಹಸೀಲ್ದಾರ್ ವಿಶ್ವನಾಥ್ ಮುರುಡಿ ಮಾತನಾಡಿ, ಇದು ಸರ್ಕಾರದ ಕೆಲಸ. ಎಲ್ಲರೂ ಆಸಕ್ತಿಯಿಂದ ಕೆಲಸ ಮಾಡಿದರೆ ತಾಲೂಕಿಗೂ ಒಳ್ಳೆಯ ಹೆಸರು ಬರಲಿದೆ. ಗಣತಿಯೂ ಯಶಸ್ವಿಯಾಗಲಿದೆ. ಆಶಾ, ಅಂಗನವಾಡಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಆರ್‌ಆರ್ ನಂಬರ್ ಜೋಡಣೆಯಾದ ಜಿಯೋ ಟ್ಯಾಗ್‌ಗಳನ್ನು ಲಗತ್ತಿಸಿದ್ದಾರೆ. ಅಂಥ ಕುಟುಂಬಗಳಿಗೆ ಗಣತಿದಾರರು ತೆರಳಿ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯ ಪರಿಪೂರ್ಣತೆಗೆ ಸಹಕರಿಸಬೇಕು. ತಾಲೂಕಿನ ಗಣತಿಗೆ ಸಂಬಂಧಿಸಿದಂತೆ ೪ ಜನ ಮಾಸ್ಟರ್ ಟ್ರೈನರ್, ೧೧ ಜನ ಮೇಲ್ವಿಚಾರಕರು, ೧೪೭ ಗಣತಿದಾರರಿದ್ದು, ಬಿಆರ್‌ಸಿ, ಸಿಆರ್‌ಪಿಗಳು ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಗಣತಿ ಕಾರ್ಯಕ್ಕೆ ಒಂದು ಮನೆಗೆ ತೆರಳಿದಾಗ ಕನಿಷ್ಠ 45 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು. ಗೊಂದಲ ಮಾಡಿಕೊಳ್ಳದೆ ಕುಟುಂಬಸ್ಥರು ಯಾವ ಜಾತಿ ಹೇಳುತ್ತಾರೋ ಆ ಜಾತಿ ನಮೂದಿಸಿ ಎಂದು ತಿಳಿಸಿದರು.ಈ ವೇಳೆ ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಾರ್ಡನ್‌ಗಳ ನೇತೃತ್ವದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಅಮರೇಶ ದೇವರಾಳ, ಉಪ ಪ್ರಾಚಾರ್ಯ ಜಗದೀಶ ಹಾದಿಮನಿ, ಸಿಬ್ಬಂದಿ ರವೀಶ ಹಿರೇಮಠ, ವಾರ್ಡನ್‌ಗಳಾದ ಹುಸೇನಬೀ, ಮಲ್ಲಯ್ಯ, ರೇಣುಕಾ ಪಾಟೀಲ್ ಇದ್ದರು.