ಕಟಾವು, ಸಾಗಾಣಿಕೆ ವೆಚ್ಚ ಕಳೆದು ಟನ್ ಕಬ್ಬಿಗೆ ₹3200 ನೀಡಿ

| Published : Nov 13 2025, 12:30 AM IST

ಸಾರಾಂಶ

ಉತ್ತರ ಕರ್ನಾಟಕ ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು 3200 ಹಾಗೂ 3300 ರು. ನಿಗದಿ ಮಾಡಿದೆ. ಆದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳ ಕಬ್ಬು ಬೆಲೆಗಾರರಿಗೆ ನೀಡದೆ ಪ್ರಾದೇಶಿಕ ತಾರತಮ್ಯ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬು ಬೆಳೆಗಾರರ ನಡುವೆ ತಾರತಮ್ಯ ನಿಲ್ಲಿಸಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ಟನ್ ಕಬ್ಬಿಗೆ 3200 ರು. ನೀಡುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು 3200 ಹಾಗೂ 3300 ರು. ನಿಗದಿ ಮಾಡಿದೆ. ಆದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳ ಕಬ್ಬು ಬೆಲೆಗಾರರಿಗೆ ನೀಡದೆ ಪ್ರಾದೇಶಿಕ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಪಡಿಸುವಲ್ಲೂ ವಂಚಿಸುತ್ತಿದೆ. 2009ಕ್ಕಿಂತ ಮುನ್ನ ಶೇ.8.50 ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತಿದೆ. ನಂತರ 2000 ರಿಂದ 2018ರ ವರೆಗೆ ಶೇ.9.50ರ ಇಳುವಳಿ ಆಧಾರದ ಮೇಲೆ ನಿಗದಿ ಮಾಡಲಾಗುತ್ತಿತ್ತು. 2022ರಿಂದ ಶೇ.20.25 ಸಕ್ಕರೆ ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ದರ ನಿಗದಿ ಮಾಡಿ ರೈತರನ್ನು ವಂಚಿಸಲಾಗುತ್ತಿದೆ ಎಂದರು.

ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 500 ಎಸ್‌ಎಪಿ ನಿಗದಿ ಪಡಿಸಬೇಕು. 2022 ಮತ್ತು 23ರಲ್ಲಿ ನಿಗದಿ ಮಾಡಿದ್ದ ಟನ್‌ಗೆ 150 ರು.ಗಳ ಬಾಕಿ ಶೀಘ್ರ ನೀಡಬೇಕು. ಜೊತೆಗೆ 2023, 24, 25ನೇ ಸಾಲಿಗೆ ಎಸ್‌ಎಪಿ ನಿಗದಿಪಡಿಸಿ ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಇಳುವರಿ ವ್ಯತ್ಯಾಸವಿದೆ. ಈ ಬಗ್ಗೆ ವಿಜ್ಞಾನಿಗಳನ್ನು ಕೇಳಿದರೆ ಅವರು ಶೇ.12ರಷ್ಟು ಇಳುವರಿ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಇದರ ವ್ಯತ್ಯಾಸವನ್ನು ಯಾರು ಮಾಡುತ್ತಾರೆ ಎಂಬುದು ತಿಳಿಯದಾಗಿದೆ ಎಂದರು.

ಕಾರ್ಖಾನೆಗಳು ರೈತರಿಗೆ ತೂಕ ಮತ್ತು ಇಳುವರಿಯಲ್ಲೂ ಮೋಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ರೈತರ ನೆರವಿಗೆ ಬಂದು ಇಳುವರಿ ತಿಳಿಯಲು ಪ್ರಯೋಗಾಲಯ ಮತ್ತು ಕಾರ್ಖಾನೆ ಒಳಗೆ ತೂಕದ ಯಂತ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಗಳು ಉಪ ಉತ್ಪನ್ನಗಳ ಆಧಾರದ ಮೇಲೂ ರೈತರಿಗೆ ದರ ನೀಡಬೇಕು. ಆದರೆ, ಯಾವ ಕಾರ್ಖಾನೆಗಳೂ ನೀಡುತ್ತಿಲ್ಲ. ಯಥೆನಾಲ್ ಘಟಕ ಇರುವ ಕಾರ್ಖಾನೆಗಳು 150 ರು. ಹಾಗೂ ಇಲ್ಲದವರು 100 ರು.ಗಳನ್ನು ರೈತರಿಗೆ ನೀಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ಅದೂ ಸಹ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಕಬ್ಬು ಖರೀದಿ ಹಾಗೂ ಪೂರೈಕೆ ನಿಯಂತ್ರಣ ಕಾಯ್ದೆ 2013ನ್ನು ರದ್ದುಗೊಳಿಸಿ ಅದಕ್ಕೂ ಮುನ್ನ ಇದ್ದ ರಾಜ್ಯ ಸಲಹಾ ಬೆಲೆ ಸ್ಥಾಪಿಸಬೇಕು. ಕೇಂದ್ರದ ಸಕ್ಕರೆ ನಿಯಂತ್ರಣ ಮಂಡಳಿಯನ್ನು ಹೊಸದಾಗಿ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನವಾಗಿ ಎಕರೆಗೆ 10 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕುಳ್ಳೇಗೌಡ, ಮುಖಂಡರಾದ ಸತೀಶ್, ರಘುನಾಥ್, ಶ್ರೀನಿವಾಸ್ ಇತರರು ಇದ್ದರು.