ಶ್ರೀಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಬಾವಿ, ಕಲ್ಯಾಣಿ ಕೊಳ ನಿರ್ಮಾಣ

| Published : Nov 13 2025, 12:30 AM IST

ಶ್ರೀಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಬಾವಿ, ಕಲ್ಯಾಣಿ ಕೊಳ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಹಾಗೂ ಭಾರತೀ ವಸತಿ ಶಾಲೆಯಿಂದ ದೇವಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ ಬಾವಿ ಮತ್ತು ಕಲ್ಯಾಣಿ ಕೊಳದ ಕಾರ್ತಿಕ ಮಾಸದ ಸೋಮವಾರ ಬಾಗಿನ ಅರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕಲ್ಯಾಣಿ ತೀರ್ಥ ಬಳಸಲು ಬಾವಿ ಮತ್ತು ಕಲ್ಯಾಣಿ ಕೊಳವನ್ನು ವಿಧಾನ ಪರಿಷತ್ ಶಾಸಕ, ಭಾರತೀ ವಿದ್ಯಾಸಂಸ್ಥೆಯ ಅಧ್ಯಕ್ಷ ಮಧು ಜಿ.ಮಾದೇಗೌಡ ಬಾಗಿನ ಅರ್ಪಿಸಿ, ಮೊದಲ ವಿಶೇಷ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

ಶ್ರೀಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಹಾಗೂ ಭಾರತೀ ವಸತಿ ಶಾಲೆಯಿಂದ ದೇವಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ ಬಾವಿ ಮತ್ತು ಕಲ್ಯಾಣಿ ಕೊಳದ ಕಾರ್ತಿಕ ಮಾಸದ ಸೋಮವಾರ ಬಾಗಿನ ಅರ್ಪಣೆ ಮಾಡಲಾಯಿತು.

ಗಂಗೆ ಪೂಜೆ, ಗೌರಿ ಪೂಜೆ, ಕಳಸ ಪೂಜೆ, ಅಡಿಕೆ ಬಟ್ಟಲ್‌ನಿಂದ ದೀಪ ಪೂಜೆ, ಜಲಾಭಿಷೇಕ, ಲಕ್ಷ್ಮಿ ಅಷ್ಟೋತ್ತರ ನಾಮಾವಳಿ, ಗಣಪತಿ ಅಷ್ಟೋತ್ತರ ನಾಮಗಳ ಪೂಜೆ ಸಲ್ಲಿಸಲಾಯಿತು. ಸೋಡೋಪಚಾರ ಪೂಜಾ ವಿಧಾನ, ನೈವಿದ್ಯ ಮಂತ್ರಗಳನ್ನು ಪಠಿಸಲಾಯಿತು.

ನಂತರ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಟ್ರಸ್ಟ್ ಕಾರ್ಯದರ್ಶಿಗಳಾದ ಸಿದ್ದೇಗೌಡ, ಬಿ.ಎಂ.ನಂಜೇಗೌಡ, ಬಿಇಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಶಯ್ ಜಿ.ಮಧು, ಪ್ರಾಂಶುಪಾಲ ಪುಟ್ಟಸ್ವಾಮಿ, ಅಂಗಸಂಸ್ಥೆ ಮುಖ್ಯಸ್ಥರು, ರೈತರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಈ ವೇಳೆ ಮಧು ಜಿ.ಮಾದೇಗೌಡ ಮಾತನಾಡಿ, ಸಂಪ್ರದಾಯದಂತೆ ದೇವಾಲಯ ಪಕ್ಕದಲ್ಲಿ ಬಾವಿ ಮತ್ತು ಪವಿತ್ರ ಕೊಳವನ್ನು ನಿರ್ಮಿಸಿದ್ದು, ಈ ಸ್ಥಳದಲ್ಲಿ ಧನಾತ್ಮಕ ಶಕ್ತಿ ಮತ್ತು ದೈವಿಕ ಶಕ್ತಿ ಹೆಚ್ಚಾಗಿರುತ್ತದೆ. ಇದು ಭಕ್ತರಿಗೆ ದೈವಿಕ ಶಕ್ತಿಯ ಅನುಭವವನ್ನು ನೀಡುತ್ತದೆ. ಆದ್ದರಿಂದ ಬಾವಿ ಮತ್ತು ಕೊಳ ನಿರ್ಮಿಸಲಾಗಿದೆ ಎಂದರು.

ನೀರು ಜೀವನದ ಮೂಲ. ಜೊತೆಗೆ ಶಕ್ತಿಯ ಸಂಕೇತವೂ ಆಗಿದೆ. ನೀರು ಧನಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ. ದೇವಾಲಯದ ಪವಿತ್ರ ಕೊಳದ ನೀರನ್ನು ಸ್ಪರ್ಶಿಸುವುದು ಹೊಸ ಶಕ್ತಿಯನ್ನು ನೀಡುತ್ತದೆ ಎಂದರು.

ಭಾರತದ ಪ್ರತಿಯೊಂದು ದೇವಾಲಯ ಮತ್ತು ಯಾತ್ರಿಕರ ಸ್ಥಳದಲ್ಲಿ ಒಂದು ಪವಿತ್ರ ಕೊಳವಿದೆ. ಈ ಜಲಮೂಲ ಅಥವಾ ಕೊಳವನ್ನು ತೀರ್ಥಂ ಅಥವಾ ಕಲ್ಯಾಣಿ ಅಥವಾ ಪುಷ್ಕರಿಣಿ ಎಂದು ಕರೆಯಲಾಗುತ್ತದೆ. ಇಲ್ಲಿ ಹೊಸದಾಗಿ ನಿರ್ಮಿಸಲಾದ ಹೆಚ್ಚಿನ ದೇವಾಲಯಗಳಲ್ಲಿ ಈ ರೀತಿಯಾದ ಕಲ್ಯಾಣಿಗಳನ್ನು ನೋಡುವುದು ಕಷ್ಟ. ನಾವು ಪ್ರಾಚೀನ ದೇವಾಲಯಗಳನ್ನು ಗಮನಿಸಿದರೆ, ಕಲ್ಯಾಣಿಯನ್ನು ಕಡ್ಡಾಯವಾಗಿ ನೋಡಬಹುದು. ಜಲಮೂಲಗಳು ದೇವಾಲಯದಲ್ಲಿನ ವಾತಾವರಣ ಮತ್ತಷ್ಟು ಶುದ್ಧಗೊಳಿಸುತ್ತದೆ ಎಂದರು.

ಇದೇ ವೇಳೆ ಮಹಾಮಂಗಳಾರತಿ ನಂತರ ಪಂಚಾಮೃತವನ್ನು ಭಕ್ತರಿಗೆ ವಿತರಿಸಲಾಯಿತು.