ಕಲ್ಪತರು ನಾಡಿನಲ್ಲಿ ಶಾಂತಿಯುತ ಮತದಾನ

| Published : Apr 27 2024, 01:01 AM IST

ಸಾರಾಂಶ

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಆರಂಭದಲ್ಲಿ ಬಿರುಸಿನಿಂದ ಕೂಡಿ, ಬಳಿಕ ಮಂದಗತಿಯಲ್ಲಿ ನಡೆಯಿತು. ಸಂಜೆ ವೇಳೆಗೆ ಮತ್ತೆ ಬಿರುಸು ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಆರಂಭದಲ್ಲಿ ಬಿರುಸಿನಿಂದ ಕೂಡಿ, ಬಳಿಕ ಮಂದಗತಿಯಲ್ಲಿ ನಡೆಯಿತು. ಸಂಜೆ ವೇಳೆಗೆ ಮತ್ತೆ ಬಿರುಸು ಪಡೆದುಕೊಂಡಿತು.

ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸೇರಿ 3 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಮೂರು ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯದ ಹಣೆ ಬರಹವನ್ನು ಮತದಾರರು ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವುದರ ಮೂಲಕ ಬರೆದಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿದ್ದ 18 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

2618 ಮತಗಟ್ಟೆಗಳಲ್ಲಿ ಉತ್ಸಾಹ ಮತದಾನ: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಗುಬ್ಬಿ, ಕೊರಟಗೆರೆ, ಮಧುಗಿರಿ, ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕುಣಿಗಲ್ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ 2618 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು.ಈ ಬಾರಿ ಹೊಸ ಮತದಾರರು, ಮಹಿಳೆಯರು, ಯುವಕರು, ಯುವತಿಯರು, ಹಿರಿಯ ನಾಗರಿಕರು, ವಿಕಲಚೇತನರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಂದ ಉತ್ಸುಕರಾಗಿ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದರು.

ಈ ಬಾರಿ ಜಿಲ್ಲಾಡಳಿತ, ಜಿಪಂ, ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಸೇರಿ ಸರ್ಕಾರಿ ಇಲಾಖೆಗಳು ಜನರಲ್ಲಿ ಮತದಾನದ ಬಗ್ಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿದ ಪರಿಣಾಮ, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಿದ್ದರೂ ಸಹ ಕೆಲವರು ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದರು.

ನಗರದ ಅಗ್ರಹಾರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ 93 ವರ್ಷದ ಹಿರಿಯ ನಾಗರಿಕರು, ಶ್ರೀರಾಮನಗರದ ಮತಗಟ್ಟೆಯಲ್ಲಿ 86 ವರ್ಷದ ಹಿರಿಯ ನಾಗರಿಕರು, ಕೊರಟಗೆರೆಯ ಮತಗಟ್ಟೆಯಲ್ಲಿ 85 ವರ್ಷದ ಹಿರಿಯ ನಾಗರಿಕರಾದ ಲಕ್ಷ್ಮಮ್ಮ, ಪಾವಗಡ ತಾಲೂಕಿನ ಜೆ. ಅಚ್ಚಮ್ಮನಹಳ್ಳಿ ಮತಗಟ್ಟೆಯಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧೆ ಮತದಾನ ಮಾಡಿದ್ದು ವಿಶೇಷವಾಗಿತ್ತು. ಹಾಗೆಯೇ ಚೊಚ್ಚಲ ಬಾರಿಗೆ ಮತದಾನ ಮಾಡುತ್ತಿದ್ದ ಯುವ ಮತದಾರರು, ಎನ್‌ಸಿಸಿ ಕೆಡೆಟ್‌ಗಳು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು. ತುಮಕೂರಿನ ಶಿರಾ ಗೇಟ್ ಮತಗಟ್ಟೆಗೆ 81 ವರ್ಷ ತಾಯಿ ಮತ್ತು 65 ವರ್ಷದ ಮಗಳು ಆಗಮಿಸಿ ಮತದಾನ ಮಾಡಿದರು.

ಗಮನ ಸೆಳೆದ ಸಖಿ ಮತಗಟ್ಟೆಗಳು: ಜಿಲ್ಲೆಯಲ್ಲಿ ಈ ಬಾರಿ 2618 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಈ ಪೈಕಿ 200ಕ್ಕೂ ಅಧಿಕ ಮತಗಟ್ಟೆಗಳನ್ನು ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನಾಗಿ ನಿರ್ಮಿಸಲಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆ (ಪಿಂಕ್ ಬೂತ್), ಯುವ ಅಧಿಕಾರಿಗಳುಳ್ಳ ಯುವ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನ ಮತಗಟ್ಟೆ ಸೇರಿ ಜಿಲ್ಲೆಯ ವಿವಿಧ ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳ, ಪ್ರಸಿದ್ಧಿ ಪಡೆದಿರುವ ಮತ್ತಿತರ ವಿಷಯಗಳ ಆಧಾರದ ಮೇಲೆ ಮಾದರಿ ಮತಗಟ್ಟೆಗಳನ್ನು ನಿರ್ಮಿಸಿದ್ದು, ಈ ಮತಗಟ್ಟೆಗಳನ್ನು ವಿವಿಧ ಬಣ್ಣಗಳು, ಬಲೂನ್, ಚಿತ್ತಾಕರ್ಷಕ ಕಲಾಕೃತಿಗಳೊಂದಿಗೆ ಸಿಂಗಾರಗೊಳಿಸಿದ್ದು ನೋಡುಗರ ಗಮನ ಸೆಳೆಯುತ್ತಿವೆ.ಜಿಲ್ಲೆಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.