ಸಾರಾಂಶ
ಮತದಾನ ಪ್ರಜಾಪ್ರಭುತ್ವದ ಹಕ್ಕು. ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿ, ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಬಂದು ಶ್ರದ್ಧೆಯಿಂದ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಮತದಾನ ಪ್ರಜಾಪ್ರಭುತ್ವದ ಹಕ್ಕು. ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿ, ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಬಂದು ಶ್ರದ್ಧೆಯಿಂದ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದರು.ನಗರದ ಸಿದ್ದಗಂಗಾ ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಸನಿವಾಸ ಹಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಭಾರತೀಯ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತ ವ್ಯವಸ್ಥೆ ಇದಾಗಿದ್ದು, ಸಂವಿಧಾನ ಕೊಟ್ಟಿರುವ ಹಕ್ಕನ್ನು ಪ್ರತಿಯೊಬ್ಬರೂ ಚಲಾವಣೆ ಮಾಡಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ನಾಯಕರು ಎನ್ನುವಂತಿದೆ. ಹಾಗಾಗಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಈ ಮತದಾನದ ಮೂಲಕ ನಮಗೆಲ್ಲರಿಗೂ ಇದೆ. ಯಾರೂ ಕೂಡಾ ಮನೆಯಲ್ಲಿ ಉಳಿಯದೇ ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನ ಮಾಡಬೇಕು. ನ್ಯಾಯ ಮತ್ತು ಮುಕ್ತವಾದ ರೀತಿಯಲ್ಲಿ ಮತದಾನ ನಡೆಯಬೇಕು ಎಂದು ಅವರು ಹೇಳಿದರು.ಪ್ರತಿಯೊಬ್ಬರೂ ತಮ್ಮ ತಮ್ಮ ಮತದ ಮಹತ್ವವನ್ನು ಅರಿತು ಮತದಾನ ಮಾಡಬೇಕು. ಮತದಾನ ಪ್ರಮಾಣ ಹೆಚ್ಚಾಗಲು ಸಾಕಷ್ಟು ಅನುಕೂಲಗಳನ್ನು ಚುನಾವಣಾ ಆಯೋಗ ಮಾಡಿಕೊಟ್ಟಿದೆ. ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಹೀಲ್ ಚೇರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಕರ್ನಾಟಕದಲ್ಲಿ ಹೆಚ್ಚು ಮತದಾನ ಮಾಡಿದವರಲ್ಲಿ ನಮ್ಮ ಹಿರಿಯ ಶ್ರೀಗಳು ಒಬ್ಬರು. ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಅದನ್ನು ನ್ಯಾಯಯುತ ಮತದಾನ ಎಂದು ಹೇಳಬಹುದಾಗಿದೆ ಎಂದ ಅವರು, ಮತದಾನವನ್ನು ಕಡ್ಡಾಯವಾಗಿ ಮಾಡಿಲ್ಲ. ಮತದಾನ ಕಡ್ಡಾಯಗೊಳಿಸುವ ಕೆಲಸ ಆಗಬೇಕಿದೆ ಎಂದರು.ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದಾರೆ. ಇದನ್ನು ಅರಿತು ಎಲ್ಲರೂ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಶ್ರೀಗಳು ಹೇಳಿದರು.