ಶಿವತಾಣಗಳಿಗೆ ಆಗಮಿಸುತ್ತಿರುವ ಜನತೆ

| Published : Feb 26 2025, 01:00 AM IST

ಶಿವತಾಣಗಳಿಗೆ ಆಗಮಿಸುತ್ತಿರುವ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕರ್ಣದಲ್ಲಿ ಮಂಗಳವಾರ ರಾತ್ರಿಯಿಂದಲೆ ಆತ್ಮಲಿಂಗದ ದರ್ಶನಕ್ಕಾಗಿ ಸರದಿಯಲ್ಲಿ ಸಾವಿರಾರು ಜನರು ನಿಂತಿದ್ದು ಕಂಡುಬಂತು

ಕಾರವಾರ: ಶಿವರಾತ್ರಿ ಆಚರಣೆಗಾಗಿ ಉತ್ತರ ಕನ್ನಡ ಜಿಲ್ಲೆಯ ಶಿವತಾಣಗಳಿಗೆ ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅದರಲ್ಲೂ ಗೋಕರ್ಣ, ಮುರ್ಡೇಶ್ವರಗಳಲ್ಲಿ ಭಕ್ತರ ಮಹಾಪೂರವೇ ಹರಿದುಬರುವ ನಿರೀಕ್ಷೆ ಇದೆ.

ಗೋಕರ್ಣ, ಮುರ್ಡೇಶ್ವರ, ಯಾಣ, ಸಹಸ್ರಲಿಂಗ, ಬನವಾಸಿ, ಕವಳಾಗುಹೆ.....ಶಿವ ದೇಗುಲಗಳಲ್ಲಿ ಪ್ರತಿ ವರ್ಷ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಗೋಕರ್ಣದಲ್ಲಿ ಮಂಗಳವಾರ ರಾತ್ರಿಯಿಂದಲೆ ಆತ್ಮಲಿಂಗದ ದರ್ಶನಕ್ಕಾಗಿ ಸರದಿಯಲ್ಲಿ ಸಾವಿರಾರು ಜನರು ನಿಂತಿದ್ದು ಕಂಡುಬಂತು. 25 ಸಾವಿರಕ್ಕೂ ಹೆಚ್ಚು ಜನರು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ನಿರೀಕ್ಷೆ ಇದೆ. ಶಿವರಾತ್ರಿ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತರ ಕನ್ನಡ ಹಾಗೂ ರಾಜ್ಯದಿಂದ ಅಷ್ಟೇ ಅಲ್ಲದೆ, ಮಹಾರಾಷ್ಟ್ರ, ಗುಜರಾತಗಳಿಂದಲೂ ಭಕ್ತರು ಆಗಮಿಸಿದ್ದಾರೆ.

ಮುರ್ಡೇಶ್ವರದಲ್ಲಿ ಈ ಬಾರಿ ಅಪಾರ ಸಂಖ್ಯೆಯಲ್ಲಿ ಜನತೆ ಆಗಮಿಸುವ ನಿರೀಕ್ಷೆ ಇದೆ.ದೇವರ ದರ್ಶನ ಹಾಗೂ ಪೂಜೆ ಸಲ್ಲಿಸಲು ಜನತೆ ನಸುಕಿನಿಂದಲೆ ಸರದಿ ಸಾಲಿನಲ್ಲಿ ನಿಲ್ಲಲಿದ್ದಾರೆ. ಶಿವರಾತ್ರಿ ಹಿನ್ನೆಲೆಯಲ್ಲಿ ಉತ್ಸವ ಏರ್ಪಡಿಸಲಾಗಿದೆ. ಪ್ರಸಿದ್ಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ಸಹಸ್ರಲಿಂಗ ಹಾಗೂ ಯಾಣಗಳಲ್ಲೂ ಸಾವಿರಾರು ಜನರು ಪೂಜೆ ಸಲ್ಲಿಸಲಿದ್ದಾರೆ. ಬನವಾಸಿ ಮಧುಕೇಶ್ವರ, ರಾಮಲಿಂಗೇಶ್ವರ ದೇವಾಲಯ, ಕವಳಾಗುಹೆಗಳಲ್ಲೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ಗೋಕರ್ಣ ಹಾಗೂ ಮುರ್ಡೇಶ್ವರಗಳಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪ್ರತಿ ವರ್ಷ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಉಂಟಾಗುತ್ತಿದೆ.

ಹಲವು ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಭಜನೆ, ಶಿವಸ್ತುತಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಜನತೆ ಶೃದ್ಧಾ, ಭಕ್ತಿಯಿಂದ ಶಿವರಾತ್ರಿ ಆಚರಣೆಯ ಸಿದ್ಧತೆ ಕೈಗೊಂಡಿದ್ದಾರೆ.