ಬಡವರ ಸೂರಿನ ಕನಸು ನನಸಾಗಿದೆ

| Published : Feb 26 2025, 01:00 AM IST

ಸಾರಾಂಶ

ಶಿವಮೊಗ್ಗ: 652 ಆಶ್ರಯ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಬಹಳ ವರ್ಷದ ಬಡವರ ಸೂರಿನ ಕನಸು ಇಂದು ನನಸಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಹೇಳಿದರು.

ಶಿವಮೊಗ್ಗ: 652 ಆಶ್ರಯ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಬಹಳ ವರ್ಷದ ಬಡವರ ಸೂರಿನ ಕನಸು ಇಂದು ನನಸಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಹೇಳಿದರು.ನಗರದ ಹೊರವಲಯದ ಗೋವಿಂದಪುರದಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಆಶ್ರಯ ಮನೆಗಳನ್ನು ಮಂಗಳವಾರ ಲಾಟರಿ ಮೂಲಕ ಫಲಾನುಭವಿಗಳಿಗೆ ನೀಡಿ ಬಳಿಕ ಅವರು ಮಾತನಾಡಿದರು.

ಬಡವರ ಬಹಳ ವರ್ಷದ ಕನಸು ಇಂದು ನನಸಾಗುತ್ತಿದೆ. ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಆಶ್ರಯ ಮನೆಗಳ ಬಗ್ಗೆ ನನ್ನ ಹತ್ತಿರ ಮಾತನಾಡಿದ್ದರು. ಅವರು ಈ ಹಿಂದೆ 624 ಮನೆಗಳನ್ನು ಹಸ್ತಾಂತರ ಮಾಡಿದ್ದರು. ಈಗ ನಮ್ಮ ಸರ್ಕಾರ 652 ಮನೆಗಳನ್ನು ವಿತರಿಸುತ್ತಿದೆ ಎಂದರು.ಒಂದು ಮನೆ ಕಟ್ಟಲು 7.8 ಲಕ್ಷ ರು. ಆಗುತ್ತದೆ. ತಡವಾಗಿರುವ ಕಾರಣಕ್ಕೆ ಹಣ ಹೆಚ್ಚಾಗಿದೆ ಎಂದ ಅವರು, ರಾಜ್ಯದಲ್ಲಿ 47,800 ಆಶ್ರಯ ಮನೆಗಳು ಅಪೂರ್ಣವಾಗಿತ್ತು. ಈ ಅಪೂರ್ಣವಾಗಿರುವ ಮನೆಗಳಿಗೆ ಸಿಎಂ ಬಳಿ ಹಣ ಹೇಗೆ ಕೇಳುವುದು ಎಂದುಕೊಂಡಿದ್ದೆ. ಆದರೆ, ಮುಖ್ಯಮಂತ್ರಿಗಳು ಎಷ್ಟೇ ಕಷ್ಟವಾದರೂ ಅನುದಾನ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಫಲಾನುಭವಿಗಳು ಕಟ್ಟಬೇಕಾದ ಹೆಚ್ಚುವರಿ ಹಣವನ್ನು ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ಅನುಮತಿ ಪಡೆದು ಸರ್ಕಾರದಿಂದಲೇ ಹೆಚ್ಚುವರಿ ಹಣ ಭರಿಸುವಂತೆ ಮಾಡಲಾಗುವುದು. ಆಕಸ್ಮಾತ್ ಹಣ ಕಟ್ಟಿದ್ದರೆ ಒಂದುವರೇ ತಿಂಗಳಿನಲ್ಲಿ ಅವರಿಗೆ ವಾಪಾಸ್ಸು ಕೊಡುತ್ತೇವೆ. ಮುಂದಿನ ತಿಂಗಳಲ್ಲಿ 41 ಸಾವಿರ ಮನೆಗಳನ್ನು ರಾಜ್ಯದಲ್ಲಿ ಬಡವರಿಗೆ ನೀಡುತ್ತೇವೆ ಎಂದು ಹೇಳಿದರು.ಆಶ್ರಯ ಮನೆಗಳ ಯೋಜನೆಯನ್ನು ಜಾರಿಗೆ ತಂದವರು ದಿ.ಬಂಗಾರಪ್ಪನವರು. ಅವರ ಯೋಜನೆಗಳನ್ನೇ ನಾವು ಮುಂದುವರೆಸುತ್ತಿದ್ದೇವೆ. ಬಡವರಿಗೆ ಮನೆ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಯಾವತ್ತು ಪಕ್ಷ ನೋಡಿ ಕೆಲಸ ಮಾಡುವುದಿಲ್ಲ. ಯಾರೂ ಒಳ್ಳೆಯ ಕೆಲಸ ಮಾಡಿದರೂ ಕೂಡ ಮೆಚ್ಚಲೇಬೇಕು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರಿಗೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಬಹುಶಃ ಇದ್ದಿದ್ದರೆ ಅವರ ಕಾಲದಲ್ಲಿ ಹೆಚ್ಚಿನ ಅನುದಾನ ಸಿಗುತ್ತಿತ್ತು ಎಂದರು.ಗೋವಿಂದಪುರ ಮನೆಗಳಿಗೆ ವಿದ್ಯುತ್ ಕೊಡಿಸುವ ಕೆಲಸ ಬೇಗನೆ ಮಾಡುತ್ತೇನೆ. ಬಸವ-ಅಂಬೇಡ್ಕರ್ ಮನೆಗಳಿಗೆ ಸರ್ಕಾರ 1.25 ಲಕ್ಷ ರು. ಕೊಡುತ್ತಿದ್ದೇವೆ. ಈ ಹಣ ಸಾಕಾಗುವುದಿಲ್ಲ. ಈ ಬಜೆಟ್‍ನಲ್ಲಿ ಎಸ್ಸಿ ಎಸ್ಟಿಗಳಿಗೆ 3.5 ಲಕ್ಷ ಸಹಾಯ ಧನ ನೀಡುವ ಯೋಜನೆ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ಆಶ್ರಯ ಯೋಜನೆ ಪ್ರಾರಂಭ ಮಾಡಿದಾಗ ರಾಜ್ಯದಲ್ಲಿ ಲಕ್ಷಾಂತರ ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತ ಗುತ್ತಿಗೆದಾರನೊಬ್ಬ ಕಮಿಷನ್ ಕೊಡಲು ಬಂದಿದ್ದ. ಆಗ ಬಂಗಾರಪ್ಪನವರು ಆ ಹಣದ ಮೊತ್ತದಲ್ಲಿ ಶೇ.15 ರಷ್ಟು ಹೆಚ್ಚುವರಿ ಮನೆಗಳನ್ನು ಬಡವರಿಗೆ ಕಟ್ಟಿ ಕೊಡಿ ಬಡವರ ಹಣ ತಿಂದರೆ ಹುಳ ಬಿದ್ದು ಸಾಯುತ್ತೇವೆ ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಕಳಿಸಿದ್ದರು ಎಂದು ತಿಳಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಬಡವರಿಗೆ ಮನೆ ಸಿಕ್ಕಿದರೆ ಸರ್ಕಾರಕ್ಕೆ ಹೆಸರು ಬರುತ್ತದೆ. ಈಶ್ವರಪ್ಪನವರು ಶಾಸಕರಿದ್ದಾಗ 624 ಮನೆ ನೀಡಿದ್ದರು. ಆಗಲೇ ನೀರು, ವಿದ್ಯುತ್‍ಗೆ ತಾತ್ಕಲಿಕ ವ್ಯವಸ್ಥೆ ಮಾಡಿದ್ದರು. ಈಗ ಮುಂದಿನ ಯೋಜನೆಗಳಿಗೆ ಸಚಿವರು ದೊಡ್ಡ ಮನಸ್ಸು ಮಾಡಿ ಹಣ ಬಿಡುಗಡೆ ಮಾಡಿ ಅತ್ಯಂತ ವೇಗದಲ್ಲಿ ಮನೆಗಳನ್ನು ವಿತರಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.

ಇದೇ ವೇಳೆ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಯಿತು.

ಶಾಸಕಿ ಶಾರದ ಪೂರ್ಯನಾಯ್ಕ, ವಿಧಾನಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್‍ಬಾನು, ಪ್ರಮುಖರಾದ ಜಿ.ಪಲ್ಲವಿ, ಎಚ್.ಎಸ್.ಸುಂದರೇಶ್, ರವಿಕುಮಾರ್, ಚಂದ್ರಭೂಪಾಲ್, ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‍ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

.