ಸಾರಾಂಶ
ಮುಂಡಗೋಡ: ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪರ ಒಲವು ಹೆಚ್ಚುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಸುಳ್ಳು ಆರೋಪ ಮಾಡುತ್ತಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಸೋಮವಾರ ಪಟ್ಟಣದಲ್ಲಿ ಸಾರಿಗೆ ಸಂಸ್ಥೆ ಬಸ್ ಡಿಪೋ ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ವಿರೋದ ಪಕ್ಷದಲ್ಲಿದ್ದುಕೊಂಡು ಆರೋಪ ಮಾಡುವುದು ಸಹಜ. ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ೨೦ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಬಿಜೆಪಿಯವರು ಆಂತರಿಕ ಕಚ್ಚಾಟದಿಂದಲೇ ಸೋಲುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಪುತ್ರಿ ಸೌಮ್ಯ ರೆಡ್ಡಿ ಅವರು ಲೋಕಸಭಾ ಟಿಕೆಟ್ ಕೇಳಿಲ್ಲ. ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಪಕ್ಷ, ಬಡವರ ಪರವಾದ ಪಕ್ಷ ಕಾಂಗ್ರೆಸ್ ಆಗಿರುವುದರಿಂದ ಸಹಜವಾಗಿ ಎಲ್ಲರಿಗೂ ಕಾಂಗ್ರೆಸ್ ಬಗ್ಗೆ ವಿಶೇಷ ಒಲವು ಇದ್ದೇ ಇರುತ್ತದೆ ಎಂದರು.
ಶಕ್ತಿ ಯೋಜನೆಯಿಂದ ಬಸ್‌ಗಳ ಬೇಡಿಕೆ ಹೆಚ್ಚಾಗಿದ್ದು, ಹೊಸದಾಗಿ ಮತ್ತಷ್ಟು ಬಸ್ ಗಳನ್ನು ಖರೀದಿಸಲಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಬಸ್‌ಗಳು ಬಂದಿವೆ. ಮೇ ಅಂತ್ಯದೊಳಗೆ ಇನ್ನುಳಿದ ಬಸ್‌ಗಳು ಬರಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ೧೬೧೯ ಸಿಬ್ಬಂದಿ ನೇಮಕ ಮಾಡಲಾಗಿದೆ. ನಿವೃತ್ತ ನೌಕರರ ಬೇಡಿಕೆಯನ್ನೂ ಈಡೇರಿಸಲಾಗಿದೆ. ಶಕ್ತಿ ಯೋಜನೆಯ ಹಣ ಸರ್ಕಾರದಿಂದ ಬರಬೇಕಾಗಿದ್ದು, ಅದರ ನಂತರ ಇನ್ನುಳಿದ ನೌಕರರ ಬೇಡಿಕೆ ಈಡೇರಿಸಲಾಗುವುದು ಎಂದರು.೪೦೦ ಸ್ಥಾನ ಬರಲ್ಲ, ಸಂವಿಧಾನ ಬದಲಾಗದುಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ೪೦೦ ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಮಾಡಬಹುದು ಎಂಬ ಮಾತು ಹೇಳಿದ್ದಾರೆ. ೪೦೦ ಸ್ಥಾನ ಬರುವುದಿಲ್ಲ ಸಂವಿಧಾನ ಬದಲಾಗುವುದಿಲ್ಲ. ಅದರ ಬಗ್ಗೆ ಯಾಕೆ ಚರ್ಚೆ ಮಾಡಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಅನಂತಕುಮಾರ ಹೆಗಡೆ ಅವರು ಸಂವಿಧಾನ ಬದಲಾವಣೆ ಬಗ್ಗೆ ಹಿಂದೆಯೂ ಹೇಳಿದ್ದರು. ಹಿಂದೆ ಮಂತ್ರಿಯಾಗಿದ್ದಾಗ ಸ್ವಲ್ಪ ಕ್ರಿಯಾಶೀಲರಾಗಿದ್ದರು. ಆದರೆ ಈ ಬಾರಿ ಮಂತ್ರಿ ಮಾಡಲಿಲ್ಲ ಎಂದು ಐದು ವರ್ಷದಿಂದ ಎಲ್ಲಿಯೂ ಕಾಣಿಸಿಕೊಳ್ಳದವರು ಈಗ ಚುನಾವಣೆ ಬಂದಿದ್ದರಿಂದ ಮತ್ತೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವ ಮೂಲಕ ಪ್ರಚಾರ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೇನು ಹೊಸತಲ್ಲ.ಶಾಸಕ ಹೆಬ್ಬಾರ ಬಂದರೆ ಸ್ವಾಗತ: ಶಾಸಕ ಎಸ್.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ್ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರೇ ಆಗಿದ್ದಾರೆ. ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಇಲ್ಲವೋ ಎಂಬುದನ್ನು ಅವರ ಹತ್ತಿರವೇ ಕೇಳಬೇಕು. ನಾನು ಹೇಳಕ್ಕಾಗಲ್ಲ. ಪಕ್ಷಕ್ಕೆ ಬಂದರೆ ಬೇಡ ಎನ್ನಲು ಆಗದು. ಕಾರ್ಯಾಧ್ಯಕ್ಷರಾಗಿ ಅವರನ್ನು ಸ್ವಾಗತಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕ ವಿ.ಎಸ್. ಪಾಟೀಲ ಇದ್ದರು.