ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ಸೂಚನಾ ಫಲಕ ಅಳವಡಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆಸ್ಪತ್ರೆ ಸಿಬ್ಬಂದಿಗೆ ಒತ್ತಡ ಹೇರಿ ಸೂಚನಾ ಫಲಕ ತೆರವುಗೊಳಿಸಿರುವ ಘಟನೆ ಸೋಮವಾರ ನಡೆದಿದೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಪ್ರವೇಶದಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ಒಕ್ಕಣೆಯ ನಾಮಫಲಕ ಅಳವಡಿಸಲಾಗಿತ್ತು. ರೋಗಿಗಳ ಇಸಿಜಿ ಮಾಡುವ ಹಾಗೂ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ರೋಗಿಗಳ ಶುಶ್ರೂಷೆಗೆ ಪೂರಕವಾಗುವಂತೆ ನಿಯಮ ಪ್ರಕಾರವಾಗಿ ಕಳೆದ ಒಂದು ವರ್ಷದ ಹಿಂದೆಯೇ ರೂಂ ಬಾಗಿಲಿಗೆ ಈ ಫಲಕ ಅಳವಡಿಸಲಾಗಿತ್ತು ಎನ್ನಲಾಗಿದೆ.ಎರಡು ದಿನಗಳಿಂದ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೂಚನಾ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೇರಲಾಗಿತ್ತು. ಒತ್ತಡದ ಹಿನ್ನೆಲೆಯಲ್ಲಿ ಸೂಚನಾ ಫಲಕ ಆಸ್ಪತ್ರೆಯವರು ತೆರವುಗೊಳಿಸಿದ್ದಾರೆ.
ಬುರ್ಖಾ ತೆಗೆಯದೆ ಇಸಿಜಿ ಮಾಡುವುದು, ತುರ್ತು ಚಿಕಿತ್ಸೆ ನೀಡಲು ಅಸಾಧ್ಯವಾಗಿರುವುದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಈ ವಿಚಾರ ಗೊಂದಲ ಮೂಡಿಸಿದೆ.ವಿವಾದದ ಕುರಿತು ಸ್ಪಷ್ಟೀಕರಣ ನೀಡಿದ ಪುತ್ತೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಅವರು, ಆಸ್ಪತ್ರೆಯ ಒಳಗಡೆ ಬುರ್ಖಾ ಧರಿಸಿ ಹೋಗಬಹುದು. ಇದು ಇಸಿಜಿ ಮಾಡಿಸಲು ಹೋಗುವ ಕೊಠಡಿಯಲ್ಲಿ ಹಾಕಿರುವ ಸೂಚನಾ ಫಲಕ. ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವೈದ್ಯರೇ ಈ ವಿಭಾಗದಲ್ಲಿ ಹೆಚ್ಚಿದ್ದಾರೆ. ಅವರೆಲ್ಲರೂ ಹಿಜಾಬ್ ಧರಿಸಿಯೇ ಡ್ಯೂಟಿ ಮಾಡ್ತಾ ಇರ್ತಾರೆ. ಇಸಿಜಿಗೆ ತೆರಳುವಾಗ ಬುರ್ಖಾ ತೆಗೆದೇ ಹೋಗಬೇಕಾಗುತ್ತದೆ. ಬುರ್ಖಾ ತೆಗೆಯದೇ ಇದ್ದಲ್ಲಿ ಚಿಕಿತ್ಸೆ ನೀಡುವುದು ಹೇಗೆ. ಇದ್ಯಾವುದೇ ಕೋಮುಭಾವನೆಯಲ್ಲಿ ಹಾಕಿದಂತ ಸೂಚನಾ ಫಲಕವಲ್ಲ ಎಂದು ವಿವರಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))