ಮಹಿಳೆಯರ ಮೇಲೆ ನಡೆಯುವ ದೈಹಿಕ, ಮಾನಸಿಕ ದೌರ್ಜನ್ಯ ಕಾನೂನಿನ ಪ್ರಕಾರ ಅಪರಾಧವಾಗಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಹಿಳೆಯರ ಮೇಲೆ ನಡೆಯುವ ದೈಹಿಕ, ಮಾನಸಿಕ ದೌರ್ಜನ್ಯ ಕಾನೂನಿನ ಪ್ರಕಾರ ಅಪರಾಧ ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಅನಿತಾಕುಮಾರಿ ಹೇಳಿದರು.ಪಟ್ಟಣದ ವೈಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಮೂಲಕ ಆನ್‌ಲೈನ್ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ನಾವು ಮೊಬೈಲ್ ಬಳಕೆ ಮಾಡುವಾಗ ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಅಪರಿಚಿತರ ಜೊತೆ ಸಂಪರ್ಕ ಮಾಡುವಾಗ ಬಹು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ದುರ್ಬಲರು ಇದ್ದಲ್ಲಿ ಶೋಷಣೆ ನಡೆಯುತ್ತದೆ. ನಾವು ಮಾನಸಿಕವಾಗಿ ಬಲವಾದರೆ ಸಮಾಜದಲ್ಲಿ ಯಾವುದೇ ತೊಂದರೆ ಬಾರದು. ಪಾಲಕರು ಮಕ್ಕಳಿಗೆ ಮೊಬೈಲ್ ಬಳಕೆಯ ಮಿತಿಯ ಅರಿವನ್ನು ನೀಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಕಾನೂನಿನ ಅರಿವನ್ನು ಕಾನೂನು ಸೇವಾ ಸಮಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಹಿರಿಯ ವಕೀಲೆ ಸರಸ್ವತಿ ಭಟ್ಟ ಉಪನ್ಯಾಸ ನೀಡಿ, ಅಂತಾರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನಾ ದಿನಾಚರಣೆ ಕೇವಲ ಕಾಯ್ದೆ ಇದ್ದರೆ ಸಾಲದು. ನಮ್ಮೆಲ್ಲರ ಮನೋಭಾವ ಬದಲಾಗಬೇಕು. ಮಹಿಳೆಯರ ಪರವಾಗಿ ಕಾನೂನಿದೆ ಎಂದು ಕಾನೂನಿನ ದುರುಪಯೋಗವಾಗಬಾರದು ಎಂದರು.ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ, ಎಪಿಪಿ ಚೇತನ ನಾಯ್ಕ ಮಾತನಾಡಿದರು.
ಮಹಿಳೆಯರಿಗೆ ವಿವಿಧ ಹಂತಗಳಲ್ಲಿ ಅನೇಕ ಸಮಸ್ಯೆಇರುತ್ತವೆ. ಮಹಿಳೆಯರು ಸಮಾಜದ ಅವಿಭಾಜ್ಯ ಅಂಗ. ಅವಿಭಕ್ತ ಕುಟುಂಬದ ರೂಪ ಬದಲಾಗಿದೆ. ಅದೇ ರೀತಿ ಶೊಷಣೆಯ ರೂಪವೇ ಬದಲಾಗಿದೆ. ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಬಾರದು. ಕಾನೂನಿನ ದುರುಪಯೋಗ ಕೂಡ ಹೆಚ್ಚಾಗುತ್ತಿದೆ. ಇದು ನಾಗರಿಕ ಸಮಾಜಕ್ಕೆ ಕಳಂಕಪ್ರಾಯವಾಗುತ್ತದೆ.ವೈ.ಟಿ.ಎಸ್.ಎಸ್. ನಿರ್ದೆಶಕ ನಾಗರಾಜ ಮದ್ಗುಣಿ, ಪ್ರಾಂಶುಪಾಲ ಆನಂದ ಹೆಗಡೆ ವೇದಿಕೆಯಲ್ಲಿದ್ದರು. ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ ಸ್ವಾಗತಿಸಿ, ನಿರ್ವಹಿಸಿದರು.