ಐತಿಹಾಸಿಕ ಪ್ರಸಿದ್ಧ ಗರಗ ಗ್ರಾಮದ ಶ್ರೀಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಆತ್ಮಾರಾಮ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಐದು ದಿನಗಳ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ 9ನೇ ವರ್ಷದ ಪಾದಯಾತ್ರೆಗೆ ಗುರುವಾರ ಚಾಲನೆ ದೊರೆಯಿತು.

ಧಾರವಾಡ:

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗರಗ ಗ್ರಾಮದ ಶ್ರೀಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಆತ್ಮಾರಾಮ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಐದು ದಿನಗಳ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ 9ನೇ ವರ್ಷದ ಪಾದಯಾತ್ರೆಗೆ ಗುರುವಾರ ಚಾಲನೆ ದೊರೆಯಿತು.

ಬೆಳಗ್ಗೆ 9ಕ್ಕೆ ಗರಗ ಗ್ರಾಮದ ಮಠದಿಂದ ಆರಂಭವಾದ ಪಾದಯಾತ್ರೆಗೆ ಶ್ರೀಮಠದ ಉತ್ತರಾಧಿಕಾರಿ ಆತ್ಮಾರಾಮ ಸ್ವಾಮೀಜಿ ಚಾಲನೆ ನೀಡಿದರು. ನಂತರ ಶ್ರೀಮಠದ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಮತ್ತು ಮಾಜಿ ಶಾಸಕ ಅಮೃತ ದೇಸಾಯಿ, ಅವರ ಪತ್ನಿ ಪ್ರಿಯಾ ದೇಸಾಯಿ, ಶ್ರೀಮಠದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ಸದಸ್ಯರು ಹಾಗೂ ಹಂಗರಕಿ, ತಡಕೋಡ, ಯಾದವಾಡ, ಹೆಬ್ಬಳ್ಳಿ, ನರೇಂದ್ರ, ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ ಗ್ರಾಮದ ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಶುರು ಮಾಡಿದರು.

ಹೀಗಿದೆ ಮಾರ್ಗ:

ನ. 27ರಂದು ಕಲ್ಮಠದಿಂದ ಪ್ರಾರಂಭವಾಗಿ ಮಂಗಳಗಟ್ಟಿ, ನರೇಂದ್ರ ಬೈಪಾಸ್ ಮಾರ್ಗವಾಗಿ ಧಾರವಾಡ ತಪೋವನಕ್ಕೆ ಆಗಮಿಸಲಿದೆ. ಮಧ್ಯಾಹ್ನ ಪ್ರಸಾದ ಸೇವನೆ, ನಂತರ ನಿಗದಿ ಮಡಿವಾಳೇಶ್ವರ ಮಠದಲ್ಲಿ ರಾತ್ರಿ ವಾಸ್ತವ್ಯ ಆಯಿತು. ನ. 28ರಂದು ಹಳಿಯಾಳ ಎಪಿಎಂಸಿಯಲ್ಲಿ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ, ಹಳಿಯಾಳ ಬಳಿಯ ಕರ್ಕಾ ಟ್ಯಾಂಕ್ ಬಳಿಯ ಆವರಣದಲ್ಲಿ ರಾತ್ರಿ ವಾಸ್ತವ್ಯ ಆಗಲಿದೆ. ನ. 29ರಂದು ದಾಂಡೇಲಿ ಮಲ್ಲಿಕಾರ್ಜುನ ಮಠದಲ್ಲಿ ಮಧ್ಯಾಹ್ನ ಪ್ರಸಾದ, ನಂತರ ಪಾಟೋಲಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ನಡೆಯಲಿದೆ. 30ರಂದು ಕಾನೇರಿಯ ಅನಾಕೊಂಡೆಯಲ್ಲಿ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಹಾಗೂ ರಾತ್ರಿ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪಿ, ವಾಸ್ತವ್ಯ ಹೂಡಲಿದೆ.

ಜೋಶಿ ಸಹ ಭಾಗಿ:

ಭಾನುವಾರ ಮಧ್ಯಾಹ್ನ 4ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಡಿ.1ರಂದು ನಸುಕಿನ ಜಾವ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಕಾರ್ತಿಕೋತ್ಸವ ಜರುಗಲಿದೆ. ಅದೇ ದಿನ ಮಧ್ಯಾಹ್ನ ಮಹಾ ಪ್ರಸಾದದ ನಂತರ ಪಾದಯಾತ್ರೆ ವಾಪಾಸ್ ಗರಗ ಮಡಿವಾಳೇಶ್ವರ ಮಠಕ್ಕೆ ಆಗಮಿಸಿ ಮುಕ್ತಾಯಗೊಳ್ಳಲಿದೆ ಎಂದು ಅಮೃತ ದೇಸಾಯಿ ತಿಳಿಸಿದರು.

ಚಾಲನೆ ವೇಳೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ನರೇಂದ್ರ ಮಳೆಪ್ಪಜ್ಜನ ಮಠದ ಸಂಗಮೇಶ್ವರ ಸ್ವಾಮೀಜಿ, ಶಿಂಗನಹಳ್ಳಿಯ ರಾಚೂಟೇಶ್ವರ ಸ್ವಾಮೀಜಿ ಹಾಗೂ ಕಲ್ಮೇಠದ ಕುಮಾರೇಶ್ವ ಸ್ವಾಮೀಜಿ ಮತ್ತು ಮುಮ್ಮಿಗಟ್ಟಿಯ ಬಸವನಂದ ಸ್ವಾಮೀಜಿಗೆ ಗೌರವ ಸಲ್ಲಿಸಲಾಯಿತು.