ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
''''ಪ್ರಸ್ತುತ ವರ್ಷ ₹೯೩.೮೦ ಲಕ್ಷ ನಿವ್ವಳ ಲಾಭ ಬಂದಿದೆ. ಶೇ.೫೦.೨೮ ರಷ್ಟು ವಸೂಲಾತಿ ಸಾಧಿಸಿದೆ. ಶೇ.೯೮.೧೩ ರಷ್ಟು ಚಾಲ್ತಿ ಸಾಲ ವಸೂಲಿಯಾಗಿದೆ. ೨೦೨೫-೨೬ನೇ ಸಾಲಿಗೆ ಹೊಸ ಸಾಲದ ಆರ್ಥಿಕ ಹಂಚಿಕೆ ಸಿಕ್ಕಿದೆ. ಇದರ ಪ್ರಯೋಜನ ಪಡೆಯಬಹುದು. ಸದಸ್ಯರ ಸಹಕಾರದಿಂದ ಪಿಕಾರ್ಡ್ ಬ್ಯಾಂಕ್ ಪ್ರಗತಿಯಲ್ಲಿದೆ. ಅಭಿವೃದ್ಧಿಗಾಗಿ ಸಲಹೆ, ಸಹಕಾರ ಬಯಸುತ್ತೇನೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ಅಧ್ಯಕ್ಷ ಎಚ್.ಎಸ್. ಇನೇಶ್ ಹೇಳಿದರು.ಪಟ್ಟಣದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಕಾರ್ಡ್ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಸದಸ್ಯ ನವೀನ್ ಕರುವಾನೆ ಮಾತನಾಡಿ, ಸುಸ್ತಿ ಸಾಲಗಾರರಿಂದ ವಸೂಲಾತಿ ಕ್ರಮದಲ್ಲಿ ಟಾಂಟಾಂ ಹೊಡೆಯಬಾರದು. ಇದರಿಂದ ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತದೆ. ಇಂತಹ ಕ್ರಮ ರಾಷ್ಟ್ರೀಕೃತ ಬ್ಯಾಂಕ್‌ಗಳು ಪಾಲಿಸುತ್ತವೆ. ನಮ್ಮ ಬ್ಯಾಂಕ್ ಸ್ವಲ್ಪ ಅನುಕಂಪ ತೋರಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಸುಸ್ತಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಿಮ್ಮನ್ನು ಯಾಕೆ ವಜಾ ಮಾಡಬಾರದು ಎಂದು ನಮ್ಮನ್ನು ಸರ್ಕಾರ ಪ್ರಶ್ನಿಸುತ್ತದೆ. ಈ ಬಾರಿ ವಸೂಲಾತಿ ಪ್ರಮಾಣ ಕುಸಿದಿದೆ. ಕೋಟಿ ವೆಚ್ಚದ ಮನೆ ಕಟ್ಟಿದವರು ಸಾಲ ಮರುಪಾವತಿಗೆ ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಇಂತಹ ಸುಸ್ತಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಹೇಗೆ ವಸೂಲಿ ಮಾಡುವುದು ಎಂದರು.ಆಹ್ವಾನ ಪತ್ರಿಕೆಯಲ್ಲಿ ಜಮಾ ಖರ್ಚು ಯಾಕೆ ತೋರಿಸುತ್ತಿಲ್ಲ. ಏನು ಉದ್ದೇಶವಿದೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇನೇಶ್, ಇಲ್ಲಿವರೆಗೆ ನಾವು ನಷ್ಟದಲ್ಲಿ ಇದ್ದೆವು. ಇದೀಗ ಸುಧಾರಣೆ ಕಾಣುತ್ತಿದ್ದೇವೆ. ಬ್ಯಾಂಕ್ ನ ಹಿತದೃಷ್ಟಿಯಿಂದ ನಾವು ಆಹ್ವಾನ ಪತ್ರಿಕೆಯಲ್ಲಿ ಜಮಾ ಖರ್ಚು ಮುದ್ರಿಸಿಲ್ಲ ಎಂದರು.ಸದಸ್ಯ ಎಚ್.ಕೆ.ಸುರೇಶ್, ಜಮಾ ಖರ್ಚು ವಿಷಯ ನಮ್ಮ ಗಮನಕ್ಕೆ ಬಂದರೆ ಮಾತ್ರ ಸಭೆಯಲ್ಲಿ ಚರ್ಚೆ ಮಾಡಲು ಸಾಧ್ಯ ವಾಗುತ್ತದೆ. ಸಭೆಗೆ ಬಂದು ಓದಿ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ. ಅಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದು ದುಂದು ವೆಚ್ಚವಾಗುವುದಿಲ್ಲ ಎಂದ ಅವರು,ಸಾಲಗಾರರಲ್ಲದವರನ್ನು ಸಂಸ್ಥೆಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು ಎಂದರು.ಕಳೆದ ಬಾರಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನನ್ನ ಹೆಸರು ಸಭಾ ನಡಾವಳಿಯಲ್ಲಿ ಇಲ್ಲ. ಚಾಲ್ತಿ ಸಾಲ ವಸೂಲಾತಿ ತೀರಾ ಕಡಿಮೆ ಇದೆ, ಕಾನೂನು ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸದಸ್ಯ ಬೆಳ್ಳಪ್ಪ ತಿಳಿಸಿದರು.
ಲಾಭಾಂಶ ವಿಲೇವಾರಿ ಕ್ರಮ ಸರಿಯಾಗಿಲ್ಲ. ಆಡಿಟ್ ವರದಿಯನ್ನು ವ್ಯವಸ್ಥಾಪಕರು ಓದಿ ಪರಿಶೀಲಿಸಿ, ಎಲ್ಲಿಯಾದರೂ ತಪ್ಪುಗಳಿದ್ದಲ್ಲಿ ಸರಿಪಡಿಸುವ ಜವಾಬ್ದಾರಿ ತೋರಬೇಕು ಎಂದು ಸದಸ್ಯ ಸುರೇಶ್ ಹೊಸೂರ್ ಒತ್ತಾಯಿಸಿದರು.ಕಳೆದ ಬಾರಿ ಬ್ಯಾಂಕ್ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಸಹಕಾರ ನೀಡಿದ ದಾನಿಗಳನ್ನು ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಪ್ರಾಸ್ತಾವಿಕ ಭಾಷಣದಲ್ಲಿ ಸ್ಮರಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಕೆ.ಆರ್.ಶ್ರೀನಿವಾಸ್, ನಿರ್ದೇಶಕರಾದ ಎನ್.ಎಲ್.ನಾಗೇಶ್, ಎಚ್.ಎಂ.ಬಡಿಯಣ್ಣ, ಕೆ.ಸಾಯಿನಾಥ್, ಬಿ.ಎಸ್.ಸತೀಶ್, ಟಿ.ಕೆ.ಬಡಿಯಣ್ಣ, ಆದರ್ಶ ಎಚ್.ಇ., ಗೋಪಾಲನಾಯ್ಕ್ ಎಚ್.ಎಸ್., ಧನ್ಯ ಎಸ್.ಎಸ್., ಲಕ್ಷ್ಮಮ್ಮ, ನಾಮ ನಿರ್ದೇಶಿತ ನಿರ್ದೇಶಕ ಬಿ.ಆರ್.ಗಣೇಶ್, ವಿಷಯ ಪರಿಣಿತ ನಿರ್ದೇಶಕರಾದ ಜೆ.ಎಂ.ಶ್ರೀಹರ್ಷ, ಎಸ್.ಎನ್.ಪುಟ್ಟರಾಜು, ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಶ್ರೀಮಂತ ಎಂ.ವಾಲಿಕರ್ ಇದ್ದರು.