ಕನ್ನಡಪ್ರಭ ವಾರ್ತೆ ಕುಮಟಾ
ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ನಮ್ಮ ಸುತ್ತಮುತ್ತಲೂ ಹಸಿರು ಬೆಳೆಸುವುದು, ಹಣ್ಣು ಹಂಪಲು ಬೆಳೆಸುವುದರಿಂದ ಆರೋಗ್ಯದ ಜತೆಗೆ ಜೀವವೈವಿಧ್ಯಗಳ ಸಮತೋಲನಕ್ಕೂ ಕಾರಣವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಪಟ್ಟಣದ ನೆಲ್ಲಿಕೇರಿ ಪಿಎಂಶ್ರೀ, ಕೆಪಿಎಸ್, ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಂಘ, ಕ್ರೀಡೆ, ರೋವರ್ಸ, ರೇಂಜರ್ಸ ಸಂಘಗಳ ಕಾರ್ಯಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎರಡೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವ ಈ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಸಾಧನೆ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕಾಲೇಜಿಗೆ ಜಾಗ ಮಂಜೂರಿಯಿಂದ ಆರಂಭಿಸಿ ಕಟ್ಟಡಗಳು, ಪ್ರಾಥಮಿಕ ಹಾಗೂ ಪ್ರೌಢ ವಿಭಾಗಕ್ಕೂ ಕಟ್ಟಡ ಸಹಿತ ಕಲಿಕೆಗೆ ಬೇಕಾದ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಿದ್ದೇನೆ ಎಂದರು.ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದಡಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿವಿಧ ಜಾತಿಗಳ ಸಾವಿರಕ್ಕೂ ಹೆಚ್ಚು ಹಣ್ಣು ಹಂಪಲು ಗಿಡಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಶಾಸಕ ಶೆಟ್ಟಿ ವಿತರಿಸಿ, ಅವರವರ ತಾಯಿಯ ಹೆಸರಿನಲ್ಲಿ ಪ್ರೀತಿಯಿಂದ ಗಿಡ ನೆಟ್ಟು ಆರೈಕೆ ಮಾಡಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಿಎಫ್‌ಒ ಯೋಗೀಶ ಮಾತನಾಡಿ, ನಾಳಿನ ಬದುಕಿಗಾಗಿ, ಜೀವ ಸಂಕುಲಗಳ ಉಳಿವಿಗಾಗಿ ಹಸಿರಿನ ಅಭಿವೃದ್ಧಿ ಅನಿವಾರ್ಯ. ಹಸಿರು ಉಳಿದರೆ ಭೂಮಿಯ ಸುಸ್ಥಿರತೆ ಉಳಿಯುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಮಾನವ ಬದುಕಿಗೂ ಪ್ರಕೃತಿಗೂ ನಡುವಿನ ಸಂಬಂಧವನ್ನು ಅರಿತು ಅದರಂತೆ ಬದುಕಿನುದ್ದಕ್ಕೂ ಪರಸ್ಪರ ಸಂವರ್ಧನೆಯ ಸಂಕಲ್ಪದೊಂದಿಗೆ ಬಾಳಬೇಕು ಎಂದರು.
ಹಿರಿಯ ಉಪನ್ಯಾಸಕ ಆರ್.ಜಿ. ನಾಯಕ ಸ್ವಾಗತಿಸಿ, ಎರಡು ಸಾವಿರಕ್ಕೂ ವಿದ್ಯಾರ್ಥಿಗಳ ಸಂಖ್ಯಾಬಲದ ಕಾಲದಲ್ಲೂ ಕೇವಲ ಎರಡು ತರಗತಿ ಕೊಠಡಿ ಹಾಗೂ ಉಪನ್ಯಾಸಕರಿಗಾಗಿ ಶೆಡ್ ನಂತಹ ಕಟ್ಟಡದಲ್ಲಿ ಆರಂಭವಾದ ನಮ್ಮ ಪಿಯು ಶಿಕ್ಷಣ ಕೇಂದ್ರವು ಶಾಸಕ ದಿನಕರ ಶೆಟ್ಟಿ ಅವರ ದೂರಗಾಮಿ ಶಿಕ್ಷಣ ಪ್ರೀತಿಯ ದ್ಯೋತಕವಾಗಿ ಸ್ವತಂತ್ರ ಜಾಗದ ಸಹಿತ ಎಲ್ಲ ಸೌಕರ್ಯಗಳನ್ನು ಪಡೆದು ಸರ್ವಾಂಗೀಣವಾಗಿ ಬೆಳೆದಿದೆ ಎಂದರು.
ವೇದಿಕೆಯಲ್ಲಿ ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ, ಇಒ ಆರ್.ಎಲ್. ಭಟ್, ಡಿಡಿಪಿಯು ಸತೀಶ ನಾಯ್ಕ, ಉಪಪ್ರಾಚಾರ್ಯ ಆರ್.ಎಚ್. ನಾಯ್ಕ, ಅಭಿವೃದ್ಧಿ ಸಮಿತಿಯ ನಿತ್ಯಾನಂದ ನಾಯ್ಕ, ಲಕ್ಷ್ಮೀ ನಾಯ್ಕ ವೇದಿಕೆಯಲ್ಲಿದ್ದರು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುವಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿಷಯವಾರು ಪೂರ್ಣಾಂಕ ಗಳಿಸಿದವರಿಗೂ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು.ಸಿಂಚನ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಗಣೇಶ ಭಟ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಉಪನ್ಯಾಸಕಿ ರೇಣುಕಾ ಹೆಗಡೆ ನಿರ್ವಹಿಸಿದರು.