ಕೊಪ್ಪಳ: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಕಲಿಕೆ ಜತೆ ಕೌಶಲ್ಯ (ಕೆ.ಜೆ.ಕೆ.) ಯೋಜನೆಯಡಿ ಕೆ.ಜೆ.ಕೆ 3.0 ಉದ್ಯೋಗ ಮೇಳ–2026 ಅನ್ನು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

2025-26ನೇ ಸಾಲಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಿಕೆ ಜತೆ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದ್ದು, 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿಕೊಂಡು ಭಾಗವಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನಡೆದ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಗೋಪಾಲಕೃಷ್ಣ ಎಚ್.ಎನ್. ಮಾತನಾಡಿ, ಪದವಿ ಶಿಕ್ಷಣದ ಜತೆಗೆ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗ ದೊರಕಿಸುವ ಮಹತ್ವದ ಪ್ರಯತ್ನವೇ ಈ ಉದ್ಯೋಗ ಮೇಳವಾಗಿದೆ ಎಂದು ಹೇಳಿದರು.

ನೋಂದಾಯಿತ ವಿದ್ಯಾರ್ಥಿಗಳಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳು ಉತ್ತಮ ಉದ್ಯೋಗ ಹಾಗೂ ಆಕರ್ಷಕ ವೇತನದ ಅವಕಾಶ ಒದಗಿಸಬೇಕು ಎಂದು ಆಶಿಸಿದ ಅವರು, ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಾಂಶುಪಾಲ ವೈ.ಬಿ. ಅಂಗಡಿ ಹಾಗೂ ಸಿಬ್ಬಂದಿ ವರ್ಗ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಪ್ರಾಂಶುಪಾಲ ವೈ.ಬಿ. ಅಂಗಡಿ, ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಸಾಂಕೇತಿಕವಾಗಿ ದೀಪ ಬೆಳಗಿಸುವ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.


ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ವಿದ್ಯಾರ್ಥಿಗಳ ಸಂದರ್ಶನ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸಿದವು. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ನೇರ ಉದ್ಯೋಗ ಪಡೆಯುವ ಅವಕಾಶ ದೊರೆಯಿತು.

ಕಾರ್ಯಕ್ರಮದಲ್ಲಿ ಬೋಧಕರಾದ ಪ್ರಕಾಶ್ ಗೌಡ ಎಸ್.ಯು., ಡಾ. ಉಮೇಶ್ ಅಂಗಡಿ, ಅನಿತಾ ಪಾಟೀಲ್, ಡಾ. ಬಾಲಾಜಿ, ಡಾ. ಮಂಜುನಾಥ್ ಅರೇಂಟನೂರ್, ಯಮನೂರಪ್ಪ, ಬಸವರಾಜ್ ಡಿ., ಸಿದ್ದಲಿಂಗೇಶ್, ವಿಜಯಲಕ್ಷ್ಮಿ ಆರ್., ಸುಧಾ ಹೆಗಡೆ, ರಶ್ಮಿ, ಡಾ. ತುಕಾರಾಂ ನಾಯ್ಕ, ಡಾ. ಮಹಾಂತೇಶ್ ನೆಲಾಗಣಿ, ಡಾ. ಪ್ರಕಾಶ್ ಬಳ್ಳಾರಿ ಸೇರಿದಂತೆ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.