ಜಾಗ ಇತ್ತು, ಮನೆ ಸಹ ಕಟ್ಟಿಕೊಳ್ಳಲಾಗಿತ್ತು. ಆದರೆ ಮಾಲಿಕತ್ವ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ತಾಲೂಕಿನ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದವು. ಆತಂಕದಲ್ಲಿಯೇ ದಿನ ದೂಡುತ್ತಿದ್ದ ಇಂಥ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ನೀಡಲಾಗಿದೆ. ಇನ್ನು ಮುಂದೆ ಈ ಎಲ್ಲ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲಿವೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಜಾಗ ಇತ್ತು, ಮನೆ ಸಹ ಕಟ್ಟಿಕೊಳ್ಳಲಾಗಿತ್ತು. ಆದರೆ ಮಾಲಿಕತ್ವ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ತಾಲೂಕಿನ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದವು. ಆತಂಕದಲ್ಲಿಯೇ ದಿನ ದೂಡುತ್ತಿದ್ದ ಇಂಥ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ನೀಡಲಾಗಿದೆ. ಇನ್ನು ಮುಂದೆ ಈ ಎಲ್ಲ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲಿವೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ನರೇಗಲ್ ಗ್ರಾಮದ ಶಾಹಿ ಮಹಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಕಂದಾಯ ಗ್ರಾಮ, ಉಪ ಗ್ರಾಮಗಳ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಹಕ್ಕುಪತ್ರದ ಸಮಸ್ಯೆ ೪೦-೫೦ ವರ್ಷಗಳಿಂದಲೂ ಪರಿಹಾರ ಕಂಡಿರಲಿಲ್ಲ. ಸತತ ೨-೩ ವರ್ಷಗಳ ಕಾಲದ ಪ್ರಯತ್ನ ಫಲ ನೀಡಿದೆ. ಕಾನೂನಿನಲ್ಲಿನ ಅವಕಾಶ ಬಳಸಿ ಕುಟುಂಬಗಳಿಗೆ ಮನೆಗಳ ಮಾಲಿಕತ್ವ ನೀಡಲಾಗಿದೆ. ಬರೀ ಬಿಳಿ ಹಾಳೆಯೊಂದರಲ್ಲಿ ಹಕ್ಕುಪತ್ರ ವಿತರಿಸಿ ಕೈ ತೊಳೆದುಕೊಳ್ಳುವ ಬದಲಿಗೆ ಖರೀದಿ ನೋಂದಣಿಯೊಂದಿಗೆ ಇಸ್ವತ್ತು, ಕಂಪ್ಯೂಟರೀಕೃತ ಹಕ್ಕುಪತ್ರ ವಿತರಿಸಲಾಗಿದೆ. ಇವೆಲ್ಲವೂ ಅಳಿಸಲಾಗದ ದಾಖಲೆಗಳು. ಹಾನಗಲ್ಲಿನಿಂದ ಆರಂಭಗೊಂಡ ಈ ಕಾರ್ಯ ಇಡೀ ರಾಜ್ಯವ್ಯಾಪಿ ವಿಸ್ತರಿಸಿ ೩.೫ ಲಕ್ಷ ಕುಟುಂಬಗಳಿಗೆ ವರದಾನವಾಗಿದೆ. ಮಾಲಿಕತ್ವದ ಕಾರಣ ಬ್ಯಾಂಕಿನವರು ಸಹ ಸಾಲ ಸೌಲಭ್ಯ ನೀಡಲು ಇನ್ನು ಮುಂದೆ ಬರಲಿದ್ದಾರೆ. ಮಳೆಗೆ ಮನೆ ಬಿದ್ದರೂ ಪರಿಹಾರವೂ ಸಿಗಲಿದೆ. ಯಾರಾದರೂ ಬಂದು ಜಾಗ ಖಾಲಿ ಮಾಡಿಸುತ್ತಾರೆ ಎನ್ನುವ ಆತಂಕ ದೂರಾಗಿದೆ ಎಂದರು.

ತಹಸೀಲ್ದಾರ್ ವಿಠ್ಠಲ್ ಚೌಗಲಾ ಮಾತನಾಡಿ, ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೇ ವರ್ದಿ ಹಾಗೂ ನರೇಗಲ್ ಗ್ರಾಮದ ೪೦೬ ಕುಟುಂಬಗಳು ಸ್ವತಂತ್ರವಾಗಿವೆ. ಈ ಎಲ್ಲ ಕುಟುಂಬಗಳಿಗೆ ವಸತಿ ಮೇಲಿನ ಹಕ್ಕನ್ನು ದೃಢಪಡಿಸುವ ಅವಕಾಶ ಸಿಕ್ಕಿದೆ. ಕಾನೂನು ಬದ್ಧವಾಗಿ ಈ ಹಕ್ಕು ಲಭಿಸಿದ್ದು, ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಗಳನ್ನು ಸ್ವತಂತ್ರಗೊಳಿಸಬೇಕು ಎನ್ನುವ ಶಾಸಕ ಶ್ರೀನಿವಾಸ ಮಾನೆ ಅವರ ಆಶಯ ಈಡೇರಿದೆ ಎಂದರು.

ಇದೇ ಸಂದರ್ಭದಲ್ಲಿ ನರೇಗಲ್ ಗ್ರಾಮದ ೨೫೫ ಹಾಗೂ ವರ್ದಿ ಗ್ರಾಮದ ೧೫೧ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಇದ್ದರು.