ಕುಷ್ಟಗಿ: ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಹಿತ್ಯ ಸಮ್ಮೇಳನಗಳ ಯಶಸ್ವಿ ಆಯೋಜನೆಯಲ್ಲಿ ಸಿಂಹಪಾಲು ಹೊಂದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಹೇಳಿದರು.

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ 14ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧ ತಾ ಸಭೆಯಲ್ಲಿ ಮಾತನಾಡಿದ ಅವರು, ಜು.25 ಮತ್ತು 26ರಂದು ಹಿರೇಮನ್ನಾಪೂರ ಗ್ರಾಮದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹುತೇಕ ಎಲ್ಲ ಸಿದ್ಧತಾ ಕಾರ್ಯ ಅಂತಿಮ ಹಂತಕ್ಕೆ ತಲುಪಿವೆ ಎಂದು ತಿಳಿಸಿದರು.

ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ವೇದಿಕೆ, ಮೆರವಣಿಗೆ, ಅತಿಥಿಗಳ ಸ್ವಾಗತ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಊಟೋಪಚಾರ ಸೇರಿದಂತೆ ಎಲ್ಲ ವ್ಯವಸ್ಥೆ ಅಂತಿಮಗೊಳಿಸಲಾಗುತ್ತಿದೆ. ನಿಗದಿತ ವೇಳಾಪಟ್ಟಿಯಂತೆ ಎಲ್ಲ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕುಷ್ಟಗಿ ತಾಲೂಕು ಕಸಾಪ ಘಟಕವು ಜಿಲ್ಲೆಯ ಇತರ ಘಟಕಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಹೀಗಾಗಿ ಕನ್ನಡಾಭಿಮಾನಿ, ಸಾಹಿತಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಹಿರೇಮನ್ನಾಪೂರ ಗ್ರಾಮದಲ್ಲಿ ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಗುರುಹಿರಿಯರು, ಯುವಕರು, ಮಹಿಳೆಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸಬೇಕು. ಕನ್ನಡದ ಮೇಲಿನ ಅಭಿಮಾನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ವೀರಮಹೇಶ್ವರಿ, ಹನಮೇಶ ಗುಮಗೇರಿ, ಮಹಿಬೂಬಸಾಬ ಕನಕಗಿರಿ, ಎಂ.ಡಿ. ಅಬ್ದುಲ್ ಕರೀಂ ವಂಟೇಳಿ, ಶರಣಪ್ಪ ಲೈನದ್, ವೀರಬಸಯ್ಯ ಕಾಡಗಿಮಠ, ಬಸವರಾಜ ಉಪ್ಪಲದಿನ್ನಿ, ದೇವರಾಜ ವಿಶ್ವಕರ್ಮ, ಲಲಿತಮ್ಮ ಹಿರೇಮಠ, ಶಿವಾನಂದ ಹಿರೇಮಠ, ನಿಂಗಪ್ಪ ಸಜ್ಜನ, ರವಿಂದ್ರಸಾ ಕಾಟವಾ, ಮಂಜುನಾಥ ಗುಳೇದಗುಡ್ಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.