ಪರಂಪರಾಗತ ಜ್ಞಾನ ಉಳಿಸಲು ಪಿಎಂ ವಿಶ್ವಕರ್ಮ ಯೋಜನೆ: ಯಶ್ಪಾಲ್‌

| Published : Sep 18 2025, 01:10 AM IST

ಸಾರಾಂಶ

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವಕರ್ಮ ಜಯಂತಿ 2025 ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ 18 ವಿವಿಧ ಕುಲ ಕಸುಬುಗಳನ್ನು ಒಂದೆಡೆ ಸೇರಿಸಿ ಪಿಎಂ - ವಿಶ್ವಕರ್ಮ ಯೋಜನೆ ಜಾರಿ ಮಾಡಲಾಗಿದೆ. ವಿಶ್ವಕರ್ಮ ಸಮಾಜದ ಪರಂಪರಾಗತ ಜ್ಞಾನ ಮುಂದಿನ ಪೀಳಿಗೆಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಮತ್ತು ದೇಶದ ಪಾರಂಪರಿಕ ಕುಲ ಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ 2025 ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಯ ಅಭಿವೃದ್ಧಿಯಲ್ಲಿಯೂ ಈ ಸಮಾಜದ ಕೊಡುಗೆ ಬಹಳಷ್ಟಿದೆ. ಇಲ್ಲಿನ ದೇಗುಲಗಳ ನಿರ್ಮಾಣ ಮತ್ತು ಜೀರ್ಣೋದ್ದಾರ ಕಾರ್ಯಗಳಲ್ಲಿ ಸಮಾಜದ ಕರ ಕುಶಲತೆ ಎದ್ದು ಕಾಣುತ್ತದೆ. ಜಿಲ್ಲೆಯ ಕುಶಲ ಕರ್ಮಿಗಳಿಗೆ ನ್ಯಾಯ ಒದಗಿಸಲು ಪ್ರಥಮ ಆದ್ಯತೆ ನೀಡುವ ಮೂಲಕ ಅವರ ಬದುಕು ಕಟ್ಟಲು ಜನರು ಕೂಡಾ ನೆರವಾಗಬೇಕು ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಶ್ವಕರ್ಮರು ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನಮಾನಸದಲ್ಲಿ ಅವರ ಬಗ್ಗೆ ವಿಶಿಷ್ಟ ನಂಬಿಕೆ ಇದೆ. ಶ್ರೀಕೃಷ್ಣನ ದ್ವಾರಕೆ ಸೇರಿದಂತೆ ಜಗತ್ತಿನ ಎಲ್ಲ ಅದ್ಭುತಗಳನ್ನು ವಿಶ್ವಕರ್ಮರು ರಚನೆ ಮಾಡಿರುವ ಬಗ್ಗೆ ಪೌರಾಣಿಕ ಉಲ್ಲೇಖಗಳಿವೆ. ಆಧುನಿಕತೆಯ ಭರಾಟೆಯಲ್ಲಿ ಅಕ್ಕಸಾಲಿಗ, ಕುಂಬಾರ, ಬಡಗಿ, ಮಡಿವಾಳ, ನೇಕಾರ ಸೇರಿದಂತೆ ಹಲವು ಕುಲ ಕಸುಬುಗಳು ಅಳಿವಿನತ್ತ ಸಾಗುತ್ತಿದ್ದು ಇವುಗಳ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವ ಕರ್ಮ ಯೋಜನೆ ಜಾರಿಗೊಳಿಸಿದ್ದು ಮುಂದಿನ ಜನಾಂಗವನ್ನು ಈ ಕ್ಷೇತ್ರಗಳತ್ತ ಆಕರ್ಷಿಸುವ ಕಾರ್ಯ ನಡೆಯುತ್ತಿದೆ ಎಂದರು.

ನಿಟ್ಟೆ ಆಪ್ಟ್‌ ಸ್ಟಾಫ್‌ ಟೆಕ್ನಾಲಜೀಸ್ ಸಂಸ್ಥಾಪಕ ಹರ್ಷವರ್ಧನ ನಿಟ್ಟೆ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ನುರಿತ 5 ಹಿರಿಯ ಕುಶಲ ಕರ್ಮಿಗಳನ್ನು ಸನ್ಮಾನಿಸಲಾಯಿತು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳ್ಳಿ, ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ನಗರಾಭಿವೃಧ್ದಿ ಕೋಶದ ಯೋಜನಾಧಿಕಾರಿ ಸುಬ್ರಮಣ್ಯ ಶೆಟ್ಟಿ, ವಿಶ್ವಕರ್ಮ ಒಕ್ಕೂಟ ಉಡುಪಿ ಮತ್ತು ದ.ಕ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಮತ್ತಿತರರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಡಾ. ಪ್ರತಿಮಾ ಜಯಪ್ರಕಾಶ ಆಚಾರ್ಯ ನಿರೂಪಿಸಿ, ವಂದಿಸಿದರು.