ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಹಲವೆಡೆ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕೋಮು ಬಣ್ಣ ಹಚ್ಚಿ ರಾಜಕೀಯ ಲಾಭ ಪಡೆಯಲು ಕೆಲ ಪಕ್ಷಗಳ ನಾಯಕರು ಮುಂದಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ ದೂರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರಿನಲ್ಲಿ ನಡೆದ ಅಪರಾಧ ಕೃತ್ಯವನ್ನು ಕೋಮು ಗಲಭೆಯಾಗಿ ಕೆಲವು ರಾಜಕೀಯ ಪಕ್ಷಗಳು ಬದಲಾಯಿಸಿದ್ದಾರೆ. ಇದು ಮೇಲಿನ ಆರೋಪಕ್ಕೆ ಪುಷ್ಟಿ ನೀಡಿದಂತಿದೆ ಎಂದರು.
ರಾಜ್ಯಾದ್ಯಂತ ನಡೆಯುತ್ತಿರುವ ಎಲ್ಲಾ ಕೋಮು ಗಲಭೆಗಳಿಗೆ ಮೂಲ ಒಂದು ಕೋಮನ್ನು ವಿರೋಸುವ ಅಥವಾ ಒಲೈಸುವ ರಾಜಕೀಯ ಪಕ್ಷಗಳ ನಾಯಕರುಗಳೇ ಆಗಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ಮನಗಾಣಬೇಕು. ಇಂತಹ ಘಟನೆಗಳು ಪದೇ ಪದೇ ಮರುಕುಳಿಸುತ್ತಿದ್ದರೂ ರಾಜಕೀಯ ಪಕ್ಷಗಳ ಮುಖಂಡರ ಎಡೆಮುರಿ ಕಟ್ಟಿ ಕಾನೂನು ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿದರು.ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತಾವು ಬೆಂಬಲಿಸುವ ಕೋಮಿನ ಮುಖಂಡರು ಮತ್ತು ಕಾರ್‍ಯಕರ್ತರ ಮೇಲಿನ ಕೋಮು ಗಲಭೆ ಪ್ರಕರಣಗನ್ನು ವಜಾ ಮಾಡುವ ಅನೈತಿಕ ರೂಢಿಯೊಂದು ರಾಜ್ಯದಲ್ಲಿ ಜಾರಿಯಲ್ಲಿದೆ. ಇದು ಕೋಮು ಗಲಭೆಗಳಲ್ಲಿ ತೊಡಗುವ ಕಿಡಿಗೇಡಿ ರಾಜಕೀಯ ಪಕ್ಷಗಳ ಕಾರ್‍ಯಕರ್ತರು ಮತ್ತು ಮುಖಂಡರುಗಳಿಗೆ ರಾಜಕೀಯ ಪಕ್ಷಗಳು ನೇರವಾಗಿ ಕುಮ್ಮಕ್ಕು ನೀಡುತ್ತಿರುವುದಕ್ಕೆ ಸಾಕ್ಷ್ಯವಾಗಿದೆ ಎಂದುಆರೋಪಿಸಿದರು.
ಕೋಮು ಗಲಭೆ ಪ್ರಕರಣಗಳು ಉದ್ಭವಿಸಿದಾಗ ಪೊಲೀಸ್ ಇಲಾಖೆಯು ಆಡಳಿತ ಪಕ್ಷವು ಸೇರಿದಂತೆ ಯಾವುದೇ ಪಕ್ಷಗಳ ಒತ್ತಡಕ್ಕೆ ಮಣಿಯದೆ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ದೇಶದಲ್ಲಿನ ಎಲ್ಲಾ ಧರ್ಮದ ಜನರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಾಗರಾಜ್, ಮುಖಂಡರಾದ ಚೇತನ್, ಮಲ್ಲೇಶ್, ಪ್ರಮೋದ್, ನಾಗರಾಜು, ಹರೀಶ್ ಇತರರು ಇದ್ದರು.
ಲೋಕಾಯುಕ್ತರಿಂದ ದೂರು/ಅಹವಾಲುಗಳ ಸ್ವೀಕಾರಮಂಡ್ಯ: ಮಂಡ್ಯ ಲೋಕಾಯುಕ್ತ ವಿಭಾಗದ ಅಧಿಕಾರಿಗಳು ತಾಲೂಕಿನಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕಾರ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕಾರ ಮಾಡಲಿದ್ದಾರೆ. ಸಭೆಯಲ್ಲಿ ಡಿವೈಎಸ್ಪಿ ಸುನೀಲ್ ಕುಮಾರ್.ಎಚ್.ಟಿ, ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಬಿ.ಪಿ.ಕುಮಾರ, ಎಂ.ಲೇಪಾಕ್ಷ ಮೂರ್ತಿ ಪಾಲ್ಗೊಳ್ಳಲಿದ್ದಾರೆ.
ಸೆ.17 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1:30ರವರೆಗೆ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುವರು. ಸಭೆಯಲ್ಲಿ ಸರ್ಕಾರಿ ಮತ್ತು ಅರೆಸರ್ಕಾರಿ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳು ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಭ ಮಾಡಿದ ಬಗ್ಗೆ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರು/ ಅಹವಾಲುಗಳೇನಾದರೂ ಇದ್ದಲ್ಲಿ ಸ್ವೀಕರಿಸಲಾಗುವುದು. ತಾಲೂಕಿನ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ದೂರು ಮತ್ತು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.