ಕಲುಷಿತಗೊಂಡಿರುವ ಇಂದಿನ ರಾಜಕಾರಣ: ವಾಟಾಳ್ ನಾಗರಾಜ್

| Published : May 25 2024, 12:52 AM IST

ಕಲುಷಿತಗೊಂಡಿರುವ ಇಂದಿನ ರಾಜಕಾರಣ: ವಾಟಾಳ್ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಪರಿಷತ್‌ಗೆ ತನ್ನದೇ ಆದ ಘನತೆ ಗೌರವವಿದೆ, ಮೇಲ್ಮನೆ ಎಂದಿಗೂ ಕೆಳ ಮನೆಯಾಗಬಾರದು, ಪರಿಷತ್ತಿಗೆ ಯಾವುದೇ ಪಕ್ಷದ ಸದಸ್ಯರನ್ನ್ನು ನಾಮಕರಣ ಮಾಡಿ. ಆದರೆ, ಸದಸ್ಯರಾಗಿ ಬರುವವರು ಒಂದಷ್ಟು ವಿಚಾರವಂತರು, ಚಿಂತಕರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾಗಿದ್ದರೆ ಅದಕ್ಕೊಂದು ಘನತೆ ತಂದುಕೊಡುತ್ತದೆ. ಇಂತಹ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತದಲ್ಲಿ ರಾಜಕೀಯ ಕಲುಷಿತಗೊಂಡು ಕುಲಗೆಟ್ಟು ಹೋಗಿದೆ, ಚಿಂತಕರ ಚಾವಡಿ ಎಂದು ಮನೆ ಮಾತಾಗಿದ್ದ ವಿಧಾನ ಪರಿಷತ್ ತನ್ನ ಗಾಂಭೀರ್ಯ ಕಳೆದುಕೊಂಡಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಆರೋಪಿಸಿದರು.

ಪರಿಷತ್‌ಗೆ ತನ್ನದೇ ಆದ ಘನತೆ ಗೌರವವಿದೆ, ಮೇಲ್ಮನೆ ಎಂದಿಗೂ ಕೆಳ ಮನೆಯಾಗಬಾರದು, ಮೇಲ್ಮನೆಯಲ್ಲಿ ಒಳ್ಳೊಳ್ಳೆ ಚಿಂತಕರು, ಆದರ್ಶವಾದಿಗಳು, ಹಿರಿಯರು ಸದಸ್ಯರಾಗಿದ್ದರು, ಸ್ವಾತಂತ್ರ್ಯ ಹೊರಾಟಗಾರರಾಗಿದ್ದ ಕೆ.ಟಿ.ಭಾಷ್ಯಂ ಅವರು ಪರಿಷತ್ತಿನ ಮೊದಲ ಸಭಾಪತಿಯಾಗಿ ಉತ್ತಮವಾಗಿ ಕೆಲಸ ಮಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಪರಿಷತ್ತಿನಲ್ಲಿ ಎಂ.ಪಿ.ಎಲ್.ರಾಜು, ಮಲ್ಲರಾಧ್ಯ, ಜಿ.ಎಚ್.ವೀರಣ್ಣ, ನಾಟಕಕಾರರ ಗುಬ್ಬಿ ವೀರಣ್ಣ, ಕಲಾವಿದರಾದ ಬಿ.ಜಯಮ್ಮ, ಎಂ.ಸಿ.ಮಹದೇವಸ್ವಾಮಿ ಸೇರಿದಂತೆ ಹಲವಾರು ವಿವಿಧ ಕ್ಷೇತ್ರಗಳ ಸಾಧಕರು ಪ್ರತಿನಿಧಿಸಿದ್ದರು, ಇಂತಹ ಗಾಂಭೀರ್ಯದ ಸದನದಲ್ಲಿ ಈಗ ತಮ್ಮ ಪಕ್ಷದವರು, ನೆಂರರಿಷ್ಟರು ಅಥವಾ ಉದ್ಯಮಿಗಳನ್ನ ಸದಸ್ಯರನ್ನಾಗಿ ನಾಮಕರಣ ಮಾಡುವಂತಹ ದುಸ್ತಿತಿ ಬಂದೊದಗಿದೆ ಎಂದು ವಿಷಾದಿಸಿದರು.

೭೫ ಸದಸ್ಯ ಬಲವುಳ್ಳ ಪರಿಷತ್ತಿಗೆ ನಾಡಿನ ಮೂಲೆಮೂಲೆಗಳಿಂದ ಸದಸ್ಯರನ್ನು ಹೆಕ್ಕಿತಂದು ನಾಮಕರಣ ಮಾಡಬೇಕಿತ್ತು, ಕೆಳಮನೆಯ ಸದಸ್ಯರಿಗೆ ಆಗಾಗ್ಗೆ ಸಲಹೆ ಸೂಚನೆ ನೀಡುವಂತಹ ಗುರುತರ ಕೆಲಸವನ್ನು ಪರಿಷತ್ತಿನ ಸದಸ್ಯರು ಮಾಡುತ್ತಿದ್ದರು. ಆದರೆ, ಇಂದು ಎಲ್ಲವೂ ಕಣ್ಮರೆಯಾಗಿವೆ, ಅದರ ಘನತೆ ಗಾಂಭೀರ್ಯ ಹೊರಟುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಷತ್ತಿಗೆ ಯಾವುದೇ ಪಕ್ಷದ ಸದಸ್ಯರನ್ನ್ನು ನಾಮಕರಣ ಮಾಡಿ. ಆದರೆ, ಸದಸ್ಯರಾಗಿ ಬರುವವರು ಒಂದಷ್ಟು ವಿಚಾರವಂತರು, ಚಿಂತಕರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾಗಿದ್ದರೆ ಅದಕ್ಕೊಂದು ಘನತೆ ತಂದುಕೊಡುತ್ತದೆ. ಇಂತಹ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕೆಂದು ಸಲಹೆ ನೀಡಿದರು.

ನಾನು ೧೯೬೭ರಲ್ಲಿ ಬೆಂಗಳೂರಿನಿಂದ ಆಯ್ಕೆಯಾಗಿದ್ದೆ, ಸದನದಲ್ಲಿ ರಾಜ್ಯಪಾಲರು ಕನ್ನಡದಲ್ಲಿಯೇ ಭಾಷಣ ಮಾಡಬೇಕೆಂದು ಹೋರಾಟ ಮಾಡಿದ್ದೆ, ಅಂದಿನ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಹಿಂದಿಯಲ್ಲಿ ಭಾಷಣ ಮಾಡುವಾಗ ಅಡ್ಡಿ ಪಡಿಸಿದ್ದೆ, ತಡೆಯಲಾರದೆ ಅವರು ಹೊರಟು ಹೋದರು, ಇಂದು ಸದನದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷಣ ಮಾಡಿದರೆ ಕೇಳುವವರೇ ಇಲ್ಲದಂತಾಗಿದೆ, ಸದನದಲ್ಲಿ ಗೈರಾದರು ಕೇಳುವವರು ಇಲ್ಲ, ನಾನು ಸದನವನ್ನ ಸಂಪೂರ್ಣವಾಗಿ ಹಾಜರಾತಿ ಕಾಯ್ದುಕೊಂಡು ಪ್ರಶಸ್ತಿ ಪಡೆದಿದ್ದೇನೆ ಎಂದರು.

ನನ್ನಂತಹವರು ಪರಿಷತ್ತಿಗೆ ಆಯ್ಕೆ ಆಗಬೇಕು ಹಾಗಾಗಿ ಶಿಕ್ಷಕರ ವೃತ್ತಿ ಪವಿತ್ರವಾದುದು, ಈ ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸಿದ್ದೇನೆ, ಶಿಕ್ಷಕರು ನನಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಯ್ಕೆ ಮಾಡಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಶಿಕ್ಷಕರ ಕರ್ತವ್ಯವೂ ಆಗಿದೆ. ಶಿಕ್ಷಕರಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಶಾಸಕರು, ಸಚಿವರ ವರ್ಗಾವಣೆ ಮಾಡುತ್ತಾರೆಂಬ ಭಯಬೇಡ ನಿಷ್ಪಕ್ಷಪತವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಮುಖಂಡರಾದ ಬೇಕ್ರಿ ರಮೇಶ್, ಚಂದ್ರಶೇಖರ್, ಜೋಸೆಫ್‌ರಾಮು, ವಿ.ಕುಮಾರ್ ಇದ್ದರು.

ಎಲ್ಲರೂ ಕಳ್ಳರಾದರೆ ಕಳ್ಳನನ್ನು ಹಿಡಿಯುವವರು ಯಾರು?

ಕನ್ನಡಪ್ರಭ ವಾರ್ತೆ ಮಂಡ್ಯ

ಎಲ್ಲಾ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಕಳ್ಳರೇ..! ಆದರೆ, ಕಳ್ಳನನ್ನು ಹಿಡಿಯುವವರು ಯಾರು ಎಂದು ಕನ್ನಡಪರ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣಕ್ಕೆ ಸ್ಪರ್ಧಿಸುತ್ತಿರುವುದಾಗಿ ಸುದ್ದಿಗೋಷ್ಠಿ ನಡೆಸಿದ ಆವರು, ಬಳಿಕ ಪ್ರಜ್ವಲ್ ರೇವಣ್ಣ ಕುರಿತಾದ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಮಹಿಳೆಯರ ಮಾನವನ್ನು ಇಂದು ದೇಶ-ವಿದೇಶಗಳಲ್ಲಿ ಹರಾಜು ಹಾಕಲಾಗಿದೆ. ನೈತಿಕ ಹೊಣೆ ಹೊತ್ತು ರಾಜ್ಯದ ಗೃಹ ಮಂತ್ರಿಗಳು ಸೇರಿದಂತೆ ಇಡೀ ಸರ್ಕಾರವೇ ಕೆಳಗಿಳಿಯಬೇಕೆಂದು ಪರೋಕ್ಷವಾಗಿ ಎಚ್ಚರಿಸಿದರು.

ಇನ್ನು ತಮಿಳುನಾಡಿಗೆ ಮತ್ತೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಸರ್ಕಾರ ತಮಿಳುನಾಡಿನೊಂದಿಗೆ ಬೀಗತನ ಮಾಡಿಕೊಂಡಿದ್ದು ಈಗಾಗಲೇ ಅವರು ಕೇಳುವ ಮೊದಲೇ ಸಾಕಷ್ಟು ನೀರು ಹರಿಸಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಸಿದೆ. ಇದೀಗ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಎಚ್ಚರಿಕೆ ನೀಡಿದರು.