ನಿಯಮಾನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್ಸು ಹಾಗೂ ಇತರೆ ವಾಣಿಜ್ಯ ವಾಹನಗಳಿಗೆ ನಿಯಮಿತವಾಗಿ ಮಾಲಿನ್ಯ ಪರೀಕ್ಷೆ (ಎಮಿಷನ್ ಟೆಸ್ಟ್) ಮಾಡಿಸುವುದು ಕಡ್ಡಾಯವಿದ್ದು, ನಿಯಮವನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ವಾಹನ ಮಾಲೀಕರಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುನಿಯಮಾನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್ಸು ಹಾಗೂ ಇತರೆ ವಾಣಿಜ್ಯ ವಾಹನಗಳಿಗೆ ನಿಯಮಿತವಾಗಿ ಮಾಲಿನ್ಯ ಪರೀಕ್ಷೆ (ಎಮಿಷನ್ ಟೆಸ್ಟ್) ಮಾಡಿಸುವುದು ಕಡ್ಡಾಯವಿದ್ದು, ನಿಯಮವನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ವಾಹನ ಮಾಲೀಕರಿಗೆ ಸೂಚಿಸಿದರು.ಬುಧವಾರ ಪ್ರಾದೇಶಿಕ ಸಾರಿಗೆ ಇಲಾಖೆ ಸಭಾಂಗಣದಲ್ಲಿ ಕಾಲಮಾನ ಪರಿಷ್ಕರಣಾ ಸಭೆ ನಡೆಸಿ ಮಾತನಾಡಿದ ಅವರು ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಬಸ್ ಹಾಗೂ ಇತರೆ ವಾಣಿಜ್ಯ ವಾಹನಗಳಿಗೆ ಎಮಿಷನ್ ಟೆಸ್ಟ್, ಇನ್ಸೂರೆನ್ಸ್ ಹಾಗೂ ಎಫ್.ಸಿ. ಮಾಡಿಸುವುದು ಕಡ್ಡಾಯವೆಂದ ಅವರು ಯಾವುದೇ ವಾಹನಗಳಿಗೆ ಅನಧಿಕೃತ ಎಲ್‌ಇಡಿ ಲೈಟ್‌ಗಳ ಅಳವಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನಧಿಕೃತವಾಗಿ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿಕೊಂಡಿರುವ ವಾಹನಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರಲ್ಲದೆ, ಪ್ರತಿಯೊಬ್ಬ ಚಾಲಕನೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇದರಿಂದ ಅಪಘಾತಗಳನ್ನು ತಪ್ಪಿಸಬಹುದು. ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೀವ ಸುರಕ್ಷತೆಗೆ ಆದ್ಯತೆ ನೀಡಿ, ವಾಹನ ಚಲಾಯಿಸಬೇಕೆಂದು ಚಾಲಕರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.ಸರಕು ಸಾಗಣೆ ವಾಹನಗಳು ನಿಗದಿಗಿಂತ ಹೆಚ್ಚು ಓವರ್‌ಲೋಡ್ (ಅತಿಯಾದ ಭಾರ) ಮಾಡಿಕೊಂಡು ಸಂಚರಿಸುವುದು ಕಂಡುಬಂದಲ್ಲಿ, ಅಂತಹ ವಾಹನಗಳ ಚಾಲಕ ಹಾಗೂ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಸರಕು ಸಾಗಣೆಗಾಗಿ ನೋಂದಣಿಯಾದ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.ಖಾಸಗಿ ಬಸ್ ಮಾಲೀಕರು ತಮ್ಮ ಬಸ್‌ಗಳನ್ನು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮತ್ತು ನಿಗದಿತ ಮಾರ್ಗದಲ್ಲಿಯೇ ಚಲಾಯಿಸುವಂತೆ ಎಚ್ಚರಿಕೆ ನೀಡಿದ ಅವರು ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಮಾನ್ಯತೆ ಪಡೆದ ಲೈಸೆನ್ಸ್ ಹೊಂದಿರುವುದು ಕಡ್ಡಾಯ. ಎಲ್ಲಾ ವಾಣಿಜ್ಯ ವಾಹನಗಳ ಚಾಲಕರು ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಆಟೋ ರಿಕ್ಷಾ ಚಾಲಕರು ಮಾನ್ಯತೆ ಪಡೆದ ಚಾಲನಾ ಪರವಾನಗಿ, ಕಡ್ಡಾಯ ವಿಮೆ (ಇನ್ಸೂರೆನ್ಸ್) ಹೊಂದಿರಬೇಕು ಎಂದರಲ್ಲದೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರಯಾಣ ದರವನ್ನು ತೋರಿಸುವ ಮೀಟರ್‌ಗಳನ್ನು ಅಳವಡಿಕೆ ಕಡ್ಡಾಯವೆಂದು ಸೂಚನೆ ನೀಡಿದರು.ಸಭೆಯಲ್ಲಿ ಆರ್‌ಟಿಒ ಅಧೀಕ್ಷಕ ದೇವರಾಜು, ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಖಾಸಗಿ ಬಸ್ ಮಾಲೀಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.