ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ರೈತರ ಬಗ್ಗೆ ಕಾಳಜಿ ಇಲ್ಲವೆಂಬ ಆರೋಪ ಮಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್‌ಗೆ ಪದೇ ಪದೇ ಹೀಗೆಯೇ ಮಾತನಾಡುತ್ತಿದ್ದು, ಅಂತಹ ವ್ಯಕ್ತಿಗೆ ಕಡ್ಲೆಬಾಳು ಮಹಿಳೆಯರೇ ಪೊರಕೆ ಸೇವೆ ಮಾಡುತ್ತಾರೆಂದು ಕಾಂಗ್ರೆಸ್ ಮುಖಂಡ, ಕಡ್ಲೆಬಾಳ್ ಗ್ರಾಪಂ ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ರೈತರ ಬಗ್ಗೆ ಕಾಳಜಿ ಇಲ್ಲವೆಂಬ ಆರೋಪ ಮಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್‌ಗೆ ಪದೇ ಪದೇ ಹೀಗೆಯೇ ಮಾತನಾಡುತ್ತಿದ್ದು, ಅಂತಹ ವ್ಯಕ್ತಿಗೆ ಕಡ್ಲೆಬಾಳು ಮಹಿಳೆಯರೇ ಪೊರಕೆ ಸೇವೆ ಮಾಡುತ್ತಾರೆಂದು ಕಾಂಗ್ರೆಸ್ ಮುಖಂಡ, ಕಡ್ಲೆಬಾಳ್ ಗ್ರಾಪಂ ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿದೇಶ ಪ್ರವಾಸ ಸಚಿವರ ವೈಯಕ್ತಿಕ ವಿಚಾರ. ಯುರೋಪ್‌ ಮಾದರಿಯಲ್ಲಿ ಜಿಲ್ಲಾ ಕೇಂದ್ರದ ರಸ್ತೆ, ವೃತ್ತಗಳನ್ನು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ ಅಭಿವೃದ್ಧಿಪಡಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳೂ ಸಾಗುತ್ತಿವೆ. ಹೀಗಿದ್ದರೂ ಧನಂಜಯ ಕಡ್ಲೆಬಾಳ್‌ ಸಚಿವ, ಸಂಸದರ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಮ್ಮ ಕಡ್ಲೆಬಾಳು ಭಾಗದಲ್ಲಿ ಇವರೊಬ್ಬ ಜೋಕರ್‌ ಇದ್ದಂತೆ ಎಂದರು

ಕಡ್ಲೆಬಾಳು ದೇವಸ್ಥಾನದಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಆಗಿನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಂದ 78 ಲಕ್ಷ ರು. ಮಂಜೂರು ಮಾಡಿಸಿದ್ದೆವು. ನಂತರ ಧನಂಜಯ ಕಡ್ಲೇಬಾಳ್ ಗುತ್ತಿಗೆ ಪಡೆದು, 33 ಲಕ್ಷ ರು. ವೆಚ್ಚದಲ್ಲಿ 5 ವರ್ಷ ಅದನ್ನು ಅರೆಬರೆಯಾಗಿ, ಕಟ್ಟಿ ಬಿಟ್ಟು ಹೋಗಿದ್ದ. ಹಾಳು ಮಾಡಿದ್ದ ಯಾತ್ರಿ ನಿವಾಸ ನಿರ್ಮಿಸಲು ಸಚಿವ ಮಲ್ಲಿಕಾರ್ಜುನ್‌ ಮತ್ತೆ ಅನುದಾನ ನೀಡಿ, ಯಾತ್ರಿ ನಿವಾಸ ನಿರ್ಮಾಣಕ್ಕೆ ಕಾರಣ‍ವಾಗಿದ್ದಾರೆ ಎಂದು ತಿಳಿಸಿದರು.

ತನ್ನ ಬಾಯಿಯಲ್ಲಿ ಮಚ್ಚೆ ಇದೆ, ಎಲ್ಲಾ ಅಧಿಕಾರಿಗಳು ಇನ್ನೊಂದು ತಿಂಗಳಲ್ಲೇ ನೀರು, ನೆರಳಿಲ್ಲದ ಕಡೆ ವರ್ಗವಾಗುತ್ತಾರೆಂದ ಹೇಳಿರುವ ಧನಂಜಯ ಕಡ್ಲೇಬಾಳ್‌ಗೆ ದಾವಣಗೆರೆ ನಗರದ ಜಗಳೂರು ಬಸ್‌ ನಿಲ್ದಾಣದಲ್ಲಿ ನಾವೇ ಬಾಡಿಗೆ ಪಡೆದು, ಮಳಿಗೆ ನೀಡುತ್ತೇವೆ. ಅಲ್ಲಿಯೇ ಇದ್ದು, ಜಾತಕ ಹೇಳುವುದು, ಭವಿಷ್ಯ ನುಡಿಯುವುದು, ಗಿಣಿ ಶಾಸ್ತ್ರ ಹೇಳುವುದನ್ನು ಮಾಡಿಕೊಂಡಿರಲಿ. ಧನಂಜಯ ತನ್ನ ಪತ್ನಿಗೆ 4 ಸಲ ಗ್ರಾಪಂ ಸದಸ್ಯೆ ಮಾಡಿದರೂ ಒಂದು ಸಲವೂ ಅಧ್ಯಕ್ಷೆ ಮಾಡಲಾಗಿಲ್ಲ ಎಂದು ಕುಟುಕಿದರು.

ಅಪೆಕ್ಸ್ ಬ್ಯಾಂಕ್ ನೂತನ ನಿರ್ದೇಶಕ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ ಮಾತನಾಡಿ, ಜಿಲ್ಲೆಯಲ್ಲಿ 750 ಮೆಟ್ರಿಕ್ ಟನ್‌ ಮೆಕ್ಕೆಜೋಳ ಖರೀದಿಸಲು ಕುಕ್ಕವಾಡ ಶುಗರ್ ಫ್ಯಾಕ್ಟರಿಗೆ ಡಿಸಿ ಸೂಚಿಸಿದ್ದಾರೆ. ಕುಕ್ಕುಟೋದ್ಯಮದವರಿಗೂ ಮೆಕ್ಕೆಜೋಳ ಖರೀದಿಗೆ ಸೂಚಿಸಿದ್ದರೆ. ಕೇಂದ್ರದ ಎಂಎಸ್‌ಪಿನಡಿ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವುದು ಇದರ ಉದ್ದೇಶ‍. ಫ್ರೂಟ್ ಆ್ಯಪ್ ಮೂಲಕ ಜಿಲ್ಲೆಯ ಅರ್ಹ ರೈತರಿಂದ ಮೆಕ್ಕೆಜೋಳ ಖರೀದಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದರು.

ಮುಖಂಡರಾದ ಬೂದಾಳ್ ಬಾಬು, ಮಂಜಾನಾಯ್ಕ, ಪಾಪಾನಾಯ್ಕ, ಕಡ್ಲೇಬಾಳು ಪ್ರಭಾಕರ, ಗಿರೀಶ, ಆನಂದ, ಎಸ್.ಕೆ.ಪ್ರವೀಣಕುಮಾರ ಯಾದವ್ ಇತರರು ಇದ್ದರು.

ಪಕ್ಷದ ನಿಷ್ಠೆಗೆ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಸ್ಥಾನ

ಕಳೆದ 35 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ನನಗೆ ಪಕ್ಷ ಕೊಟ್ಟಿದ್ದ ಬಿ ಫಾರಂ ಸಹ ಬೇರೆಯವರಿಗೆ ಕೊಡು ಅಂದಾಗ ಅದನ್ನು ಕೊಟ್ಟು, ಚುನಾವಣೆಯಲ್ಲಿ ಗೆಲ್ಲಿಸಲು ದುಡಿದವನು. ನನ್ನ ಪಕ್ಷ ನಿಷ್ಠೆ ಗುರುತಿಸಿ, ನಮ್ಮ ನಾಯಕರು ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ ನನ್ನನ್ನು ನಿರ್ದೇಶಕರಾಗಿ ಮಾಡಿದ್ದಾರೆ. ಪಕ್ಷದ ಹಿರಿಯ ಕಾರ್ಯಕರ್ತ ಅಂತ ನನ್ನನ್ನು ಪಕ್ಷ ಗುರುತಿಸುತ್ತದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿಕೆಗೆ ಪ್ರತಿಕ್ರಿಯಿಸಿದರು.