ಪೊನ್ನಂಪೇಟೆ: ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆ ಅಧ್ಯಕ್ಷ ಪೊನ್ನಿಮಾಡ ಸುರೇಶ್ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ವೈದ್ಯರಾದ ಡಾ. ಗ್ರೀಷ್ಮ ಬೋಜಮ್ಮ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರನ್ನು ಗೌರವಿಸಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ಡಾ. ಗ್ರೀಷ್ಮ ಬೋಜಮ್ಮ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ. ದಿನನಿತ್ಯದ ಜೀವನದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್ ಮಾತನಾಡಿ, ಶೀಘ್ರದಲ್ಲೇ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ವಿದ್ಯಾ ಸಂಸ್ಥೆ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ, ನಮ್ಮ ಸಮಾಜದ ಆರೋಗ್ಯವನ್ನು ಕಾಪಾಡುತ್ತಿರುವ ಎಲ್ಲ ವೈದ್ಯರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು.ವಿದ್ಯಾಸಂಸ್ಥೆ ಕಾರ್ಯದರ್ಶಿ, ಕೊಣಿಯಂಡ ಸಂಜು ಸೋಮಯ್ಯ, ಉಪಾಧ್ಯಕ್ಷ ಮೂಕಳೇರ ಕಾವ್ಯ ಕಾವೇರಮ್ಮ, ಜಂಟಿ ಕಾರ್ಯದರ್ಶಿಗಳಾದ ಕಳ್ಳಿಚಂಡ ದೇವಯ್ಯ, ಇಂಟರ್‌ನಲ್ ಆಡಿಟರ್ ಗುಮ್ಮಟ್ಟಿರ ಗಂಗಮ್ಮ, ಮುಖ್ಯೋಪಾಧ್ಯಾಯರಾದ ತನುಜ ಸೇರಿದಂತೆ ಸಿಬ್ಬಂದಿ ವರ್ಗ, ಶಿಕ್ಷಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ತನುಜ ಸ್ವಾಗತಿಸಿ, ವಿದ್ಯಾರ್ಥಿ ಎ.ಯು.ಶಿಫ್ನಾ ನಿರೂಪಿಸಿ, ದಿಶಾ ತಂಡ ಪ್ರಾರ್ಥಿಸಿ, ಶಿಕ್ಷಕಿ ಆಶೀದ ವಂದಿಸಿದರು.