ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಬಳಿ ಕಾಡಾನೆ ದಾಳಿಗೆ ತುತ್ತಾದ ವಿದ್ಯಾರ್ಥಿನಿ ಪೂಜಾ ಕುಟುಂಬದವರಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಭಾನುವಾರ ಸಾಂತ್ವನ ಹೇಳಿದರು.

ಬೆಟ್ಟತ್ತೂರಿನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕರು, ವಿದ್ಯಾರ್ಥಿನಿಯ ಸಾವು ನೋವು ತಂದಿದೆ, ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಒದಗಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.

ಇಲ್ಲಿನ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜತೆ ಚರ್ಚಿಸಲಾಗಿದ್ದು, ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಲಾಗಿದೆ ಎಂದರು.

ಆನೆಯ ಪತ್ತೆಗೆ ಆಧುನಿಕ ಡ್ರೋನ್ ವ್ಯವಸ್ಥೆಯನ್ನು ಮಾಡಲಾಗಿದ್ದು, ನೈಟ್ ವಿಷನ್ ಹಾಗೂ ಥರ್ಮಲ್ ಇಮೇಜಿಂಗ್ ಡ್ರೋನ್ ಇದಾಗಿದ್ದು ರಾತ್ರಿ ಕಾರ್ಯಾಚರಣೆ ಮುಂದುವರಿಯಲಿದೆ. ಸ್ಥಳದಲ್ಲಿ ಇದ್ದ ಶಾಸಕರು ಡ್ರೋನ್ ಮುಖಾಂತರ ಆನೆ ಪತ್ತೆ ಕಾರ್ಯಚರಣೆ ಮಾಡುವುದನ್ನು ಸ್ವತಃ ವೀಕ್ಷಿಸಿದರು.


ಭೇಟಿ ಸಂದರ್ಭದಲ್ಲಿ ನತದೃಷ್ಟ ವಿದ್ಯಾರ್ಥಿನಿಯ ಮನೆಯಲ್ಲಿ ಯಾರಾದರೂ ಒಬ್ಬರಿಗೆ ಸರ್ಕಾರಿ ಉದ್ಯೋಗದ ಬೇಡಿಕೆ ಬಂದಿದ್ದು, ಇದನ್ನು ಸರ್ಕಾರ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ಈ ಸಂದರ್ಭ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಸೋನಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಇತರರು ಇದ್ದರು.