ಗುಂಡಿ ಬಿದ್ದ ರಸ್ತೆಗಳು, ರೈತರ ಗೋಳು ಕೇಳೋರಿಲ್ಲ ಸರ್ಕಾರ ಸತ್ತಿದೆ: ಆರ್. ಅಶೋಕ್

| Published : Nov 06 2025, 01:15 AM IST

ಗುಂಡಿ ಬಿದ್ದ ರಸ್ತೆಗಳು, ರೈತರ ಗೋಳು ಕೇಳೋರಿಲ್ಲ ಸರ್ಕಾರ ಸತ್ತಿದೆ: ಆರ್. ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ, ಗುಂಡಿ ಬಿದ್ದ ರಸ್ತೆಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕೊಲೆ ಸುಲಿಗೆಗಳು ಅಧಿಕವಾಗಿವೆ, ರಾಜ್ಯದಲ್ಲಿ ಎರಡು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವತ್ತು ಮಂಡ್ಯದಲ್ಲಿ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ನವೆಂಬರ್ ಕ್ರಾಂತಿಯಾಗಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ನಾನು ಹೇಳಿದ್ದ ಭವಿಷ್ಯ ನಿಜವಾಗಿದೆ, ಸಿದ್ದರಾಮಯ್ಯ ರಾಜೀನಾಮೆ ನೀಡಿ ಗಂಟು ಮೂಟೆ ಕಟ್ಟಲು ಸಿದ್ದರಾಗಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ, ಸತ್ತ ಹೆಣವನ್ನು ಡಿ.ಕೆ. ಶಿವಕುಮಾರ್ ಅಥವಾ ಬೇರೆ ಯಾರಾದರೂ ಹೊರಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಬುಧವಾರ ತಾಲೂಕಿನ ಹಲವು ಗ್ರಾಮಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆ ನಡೆಸದೆ ಮುಂದೂಡುತ್ತಿರುವ ತಾಲೂಕು ಆಡಳಿತದ ವಿರುದ್ಧ ತಾಲೂಕು ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪೊಲೀಸರು ಸಿಬ್ಬಂದಿ ಕೊರತೆಯ ನೆಪವೊಡ್ಡಿ ಮುಂದೂಡುತ್ತಿದ್ದಾರೆ, ಚುನಾವಣೆಗಳನ್ನು ಶಾಸಕರು ಮತ್ತು ಸಂಸದರು ಹೇಳಿದ್ದಾರೆ ಎಂದು ಮುಂದೂಡುವುದಲ್ಲ, ಚುನಾವಣೆಗಳನ್ನು ನಿಯಮಬದ್ಧವಾಗಿ ನಡೆಸಬೇಕು, ಆದರೆ ಚುನಾವಣೆಯನ್ನು ಮುಂದೂಡಿ ಸದಸ್ಯರಿಗೆ ಹಣದ ಆಮಿಷವೊಡ್ಡುವ ಕೆಲಸ ನಡೆಯುತ್ತಿದೆ, ಆದ್ದರಿಂದ ಮಾಜಿ ಶಾಸಕ ಹರ್ಷವರ್ಧನ್ ಅವರ ಮನವಿ ಮೇರೆಗೆ ಇಲ್ಲಿಗೆ ಬಂದು ಈ ಬಗ್ಗೆ ಉಪವಿಭಾಗದ ಡಿವೈಎಸ್ಪಿ ಹಾಗೂ ತಹಸೀಲ್ದಾರ್ ಅವರಿಗೆ ಮುಂದಿನ ಒಂದು ವಾರದಲ್ಲಿ ಚುನಾವಣೆ ನಡೆಸುವಂತೆ ತಾಕೀತು ಮಾಡಲಾಗಿದೆ, ಮತ್ತೆ ಚುನಾವಣೆ ಮುಂದೂಡಿ ಅವ್ಯವಹಾರ ನಡೆಸಿದರೆ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸರ್ಕಾರ ಪಾಪರ್ ಆಗಿದೆ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ, ಗುಂಡಿ ಬಿದ್ದ ರಸ್ತೆಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕೊಲೆ ಸುಲಿಗೆಗಳು ಅಧಿಕವಾಗಿವೆ, ರಾಜ್ಯದಲ್ಲಿ ಎರಡು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವತ್ತು ಮಂಡ್ಯದಲ್ಲಿ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ, ಮಾನವ ಮತ್ತು ಪ್ರಾಣಿ ಸಂಘರ್ಷದಿಂದಾಗಿ ರೈತರ ಪ್ರಾಣ ಹಾನಿಯಾಗುತ್ತಿದೆ ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ಬೇಲಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿತ್ತು, ಅದನ್ನು ಕಾಂಗ್ರೆಸ್ ಸರ್ಕಾರ ಪೂರ್ಣಗೊಳಿಸಿಲ್ಲ ಜೊತೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 213 ಕೋಟಿ ಖರ್ಚು ಮಾಡಿ ಕೆರೆಗಳನ್ನು ತುಂಬಿಸಲಾಗಿತ್ತು, ಈ ಸರ್ಕಾರ ಉಚಿತ ಯೋಜನೆಗಳಿಂದಾಗಿ ಪಾಪರ್ ಆಗಿದೆ, ಈ ಸರ್ಕಾರ ಹೆಣ್ಣು ಮಕ್ಕಳನ್ನು ಬಸ್ ಹತ್ತಿಸಿ ಇಳಿಸುವುದು ಬಿಟ್ಟರೆ, ಏನನ್ನು ಮಾಡಿಲ್ಲ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ, ಈ ಸರ್ಕಾರ ತೊಲಗುವವರೆಗೆ ಜನರ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಿದರು.

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ತಾಲೂಕಿನ ಕಸುವಿನಹಳ್ಳಿ, ಹೆಡಿಯಾಲ, ಹಾಡ್ಯ ಗ್ರಾಮಗಳ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನಿರ್ದೇಶಕರ ಆಯ್ಕೆಯಾಗಿದೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನ. 5 ರಂದು ಚುನಾವಣೆ ನಡೆಸಬೇಕಾಗಿತ್ತು, ಪೊಲೀಸರು ಸಿಬ್ಬಂದಿ ಕೊರತೆಯ ನೆಪವೊಡ್ಡಿ ಚುನಾವಣೆ ಮುಂದೂಡಿದ್ದಾರೆ, ಪಟ್ಟಣದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಿದೆ, ಕೊಲೆ, ದರೋಡೆಗಳು ಅವ್ಯಾಹತವಾಗಿ ನಡೆಯುತ್ತಿದೆ, ಮೊನ್ನೆ ಹಾಡಹಗಲೇ ಮನೆಯಲ್ಲಿದ್ದ ಒಂಟಿ ವೃದ್ದೆಯ ಮೇಲೆ ಹಲ್ಲೆ ಮಾಡಿ, ಕಳ್ಳರು ದರೋಡೆ ನಡೆಸಿದ್ದಾರೆ, ತಾಲೂಕು ಆಡಳಿತ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ಶಾಸಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕ ನಾಗೇಂದ್ರ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ಎಸ್.ಎಂ. ಕೆಂಪಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಅಧ್ಯಕ್ಷ ಸಿದ್ದರಾಜು, ನಗರಸಭಾ ಸದಸ್ಯ ಮಹದೇವ ಪ್ರಸಾದ್, ಮುಖಂಡರಾದ ಬಾಲಚಂದ್ರ, ವಿನಯ್ ಕುಮಾರ್, ಮಂಜುನಾಥ್, ಶ್ರೀನಿವಾಸ ರೆಡ್ಡಿ, ಸಿದ್ದರಾಜು, ಮಹೇಶ್, ಮಲ್ಲೇಶ್, ಗಿರೀಶ್, ಮಹೇಶ್ ಬಾಬು, ಉಮೇಶ್ ಮೋದಿ, ಕೃಷ್ಣ, ಮಹದೇವಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ ಇದ್ದರು.