ಎಲ್ಲೆಂದರಲ್ಲಿ ಕಸ ಎಸೆದರೆ ಎಫ್‌ಐಆರ್: ಕೆ.ಶೇಷಾದ್ರಿ

| Published : Nov 06 2025, 01:15 AM IST

ಸಾರಾಂಶ

ನ. 10ರಿಂದ ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆಯುವ ನಾಗರಿಕರಿಗೆ ತಲಾ 5 ಸಾವಿರ ರು. ದಂಡ ವಿಧಿಸುತ್ತೇವೆ. ಎರಡು ಬಾರಿ ದಂಡ ವಿಧಿಸಿದ ನಂತರವೂ ಮೂರನೇ ಬಾರಿಗೆ ಎಲ್ಲೆಂದರಲ್ಲಿ ಕಸ ಎಸೆದರೆ ಅಂತಹವರ ವಿರುದ್ದ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುತ್ತೇವೆ.

ಕನ್ನಡಪ್ರಭ ವಾರ್ತೆ ರಾಮನಗರ

ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ನಾಗರೀಕರಿಗೆ ನ.9ರವರೆಗೆ ಗುಲಾಬಿ ಹೂವು ನೀಡಿ ಅರಿವು ಮೂಡಿಸುತ್ತೇವೆ. ಆನಂತರವೂ ಕಸ ಎಸೆದವರಿಗೆ ದಂಡ ವಿಧಿಸುವ ಜೊತೆಗೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಎಚ್ಚರಿಸಿದರು.

ನಗರಸಭೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 10ರಿಂದ ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆಯುವ ನಾಗರಿಕರಿಗೆ ತಲಾ 5 ಸಾವಿರ ರು. ದಂಡ ವಿಧಿಸುತ್ತೇವೆ. ಎರಡು ಬಾರಿ ದಂಡ ವಿಧಿಸಿದ ನಂತರವೂ ಮೂರನೇ ಬಾರಿಗೆ ಎಲ್ಲೆಂದರಲ್ಲಿ ಕಸ ಎಸೆದರೆ ಅಂತಹವರ ವಿರುದ್ದ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುತ್ತೇವೆ. ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಸೂಚನೆಯೂ ಇದೆ. ಹೀಗಾಗಿ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರದ ವಿವಿಧ ವಾರ್ಡುಗಳಲ್ಲಿ ನಾಗರಿಕರು ಕಸ ಎಸೆಯುತ್ತಿರುವ 54 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಬ್ಲಾಕ್‌ ಸ್ಪಾಟ್‌ ಗಳ ಬಳಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಕಸ ಎಸೆಯದಂತೆ ಮನವಿ ಮಾಡುತ್ತಾರೆ. ಬಳಿಕ ಕಸ ಎಸೆದವರಿಗೆ 5 ಸಾವಿರ ದಂಡ ವಿಧಿಸಿ, ಎಫ್‌ಆರ್ ದಾಖಲಿಸುತ್ತೇವೆ ಎಂದರು.

ನಗರದ ಸ್ವಚ್ಛತೆಯಲ್ಲಿ ನಾಗರಿಕರ ಹೊಣೆಗಾರಿಕೆಯೂ ಇದೆ. ನಗರಸಭೆ ಕಸ ಸಂಗ್ರಹಣಾ ವಾಹನಗಳು ಮನೆ ಬಳಿಗೆ ಬರುತ್ತಿವೆ. ನಗರಸಭೆಯ ಕಸ ಸಂಗ್ರಹಣಾ ವಾಹನಗಳಲ್ಲೇ ಒಣ ಕಸ, ಹಸಿ ಕಸ ಬೇರ್ಪಡಿಸಿ ಕೊಡಬೇಕು. ಆದಾಗ್ಯೂ ವಿದ್ಯಾವಂತರು, ತಿಳುವಳಿಕೆ ಉಳ್ಳವರೇ ರಸ್ತೆ ಬದಿ ಕಸ ಎಸೆದು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭೆ ವ್ಯಾಪ್ತಿಯ 31 ವಾರ್ಡುಗಳಲ್ಲಿ ಮನೆ ಬಳಿಗೆ ಕಸ ಸಂಗ್ರಹಿಸಲು ವಾಹನಗಳು ಬರುತ್ತಿವೆ. ನಗರಸಭೆಯ ಬಳಿ ಸಧ್ಯಕ್ಕೆ 28 ವಾಹನಗಳಿವೆ. ಪ್ರತಿಯೊಂದು ವಾರ್ಡಿಗೂ ಕಸ ಸಂಗ್ರಹಣೆ ವಿಚಾರದಲ್ಲಿ ಮೇಸ್ತ್ರಿಗಳನ್ನು ನೇಮಿಸಿದ್ದೇವೆ. ಕಸದ ವಾಹನ ಬರದಿದ್ದರೆ ಸದರಿ ಮೇಸ್ತ್ರಿಗಳಿಗೆ ಫೋನು ಮಾಡಿದರೆ ವಾಹನದ ವ್ಯವಸ್ಥೆ ಮಾಡುತ್ತಾರೆ. ನಗರದ ಸ್ವಚ್ಛತೆಗೆ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು, ಜಾಹೀರಾತುಗಳು ಇತ್ಯಾದಿ ವಿಚಾರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಬೇಕಾದರೆ ಅಂತಹವರು ಮೊದಲು ನಗರಸಭೆಯಿಂದ ಅನುಮತಿ ಪಡೆಯಬೇಕು. ಫ್ಲೆಕ್ಸ್‌ಗಳ ಸಂಖ್ಯೆ ಮತ್ತು ಅವಧಿಯನ್ನು ತಿಳಿಸಬೇಕು. ಹೀಗೆ ಅನುಮತಿ ಪಡೆಯದ ಫ್ಲೆಕ್ಸ್ ಅಳವಡಿಸಿದ ಯಾರೇ ಆಗಲಿ ತೆಗೆದುಹಾಕುತ್ತೇವೆ. ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಪ್ರಭಾವಿಗಳು, ಸಂಘ-ಸಂಸ್ಥೆಗಳು ಹೀಗೆ ಯಾರಿಗೂ ವಿನಾಯಿತಿ ಇಲ್ಲ ಎಂದು ಶೇಷಾದ್ರಿ ಸ್ಪಷ್ಟ ಪಡಿಸಿದರು.

ನಗರಸಭೆಯ ಆಯುಕ್ತ ಡಾ.ಜಯಣ್ಣ ಮಾತನಾಡಿ, ನಗರಸಭೆ ವತಿಯಿಂದ ಕಸ ಸಂಗ್ರಹಣಾ ವಿಚಾರದಲ್ಲಿ ಮೇಸ್ತ್ರಿಗಳನ್ನು ನೇಮಿಸಲಾಗಿದ್ದು, ಅವರನ್ನು ಸಂಪರ್ಕಿಸಬಹುದು. ಯುಜಿಡಿ ಮತ್ತು ಇತರ ಸಮಸ್ಯೆಗಳಿಗೆ ಹೆಲ್ಪ್ ಲೈನ್ : 080 - 23108108 ಈ ಸಂಖ್ಯೆಗೆ ನಾಗರಿಕರು ಕರೆ ಮಾಡಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಉಪಾಧ್ಯಕ್ಷೆ ಆಯಿಷಾ ಬಾನು, ಪರಿಸರ ಅಭಿಯಂತರ ಸುಬ್ರಮಣಿ ಇದ್ದರು.

...ಬಾಕ್ಸ್ ...

ಕಸ ವಿಲೇವಾರಿ - ಮೇಸ್ತ್ರಿಗಳ ವಿವರ

1 ರಿಂದ 10 ಮತ್ತು 12ನೇ ವಾರ್ಡು : ಕೊಲ್ಲಾಪುರಿ – 8971339843

13,14,15,17 ನೇ ವಾರ್ಡುಗಳು : ಪಿ.ನರಸಿಂಹ - 9740881500

11,21,22,23ನೇ ವಾರ್ಡುಗಳು: ಮೋಹನ್ - 7892990608

15,18,19,20 ಮತ್ತು 24ನೇ ವಾರ್ಡುಗಳು : ಮಾರಪ್ಪ – 9964301730

25,26 ಮತ್ತು 29ನೇ ವಾರ್ಡುಗಳು: ವೆಂಕಟರಮಣ - 9741191770

27,28,30 ಮತ್ತು 31ನೇ ವಾರ್ಡುಗಳು : ದೇವೇಂದ್ರ - 78929008005ಕೆಆರ್ ಎಂಎನ್ 3.ಜೆಪಿಜಿ

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.