ಬೇಲೂರಿನ ಅಂಬೇಡ್ಕರ್‌ ಭವನ ಬಳಿಯ ಕೋಳಿ ಅಂಗಡಿಗಳಿಗೆ ಬೀಗ

| Published : Mar 13 2024, 02:04 AM IST

ಸಾರಾಂಶ

ಬೇಲೂರಿನ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳನ್ನು ತೆರವು ಮಾಡಲು ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ಬೀಗ ಮುದ್ರೆ ಹಾಕಲಾಯಿತು.

ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್, ಮುಖ್ಯಾಧಿಕಾರಿ ನೇತೃತ್ವದಲ್ಲಿ ಕ್ರಮ । ಅನಧಿಕೃತ ಗೂಡುಗಳ ತೆರವಿಗೆ 30 ವರ್ಷಗಳಿಂದ ಯತ್ನಕನ್ನಡಪ್ರಭ ವಾರ್ತೆ ಬೇಲೂರು

ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳನ್ನುತೆರವು ಮಾಡಲು ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ಬೀಗ ಮುದ್ರೆ ಹಾಕಲಾಯಿತು.

ಸುಮಾರು ೩೦ ವರ್ಷಗಳಿಂದಲೂ ಮುಸುಕಿನ ಗುದ್ದಾಟದಲ್ಲಿ ಸಾಗುತ್ತಿದ್ದ ಕೋಳಿ ಅಂಗಡಿಗಳ ತೆರವು ಕಾರ್ಯಾಚರಣೆ ಹಾಗೂ ಸಾರ್ವಜನಿಕರು ಮತ್ತು ದಲಿತ ಸಂಘಟನೆಗಳ ಒತ್ತಾಸೆಯ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲಿ ಅನಧಿಕೃತವಾಗಿ ಇದ್ದ ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಶಾಸಕರ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಭೆಯಲ್ಲಿ ದಲಿತ ಮುಖಂಡರು ಕೋಳಿ ಅಂಗಡಿಗಳನ್ನು ಕೂಡಲೇ ತೆರವುಗೊಳಿಸದಿದ್ದರೆ ಪುರಸಭೆ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಶಾಸಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮಂಗಳವಾರ ಸಂಜೆಯೊಳಗೆ ಅಲ್ಲಿರುವ ಅನಧಿಕೃತ ಕೋಳಿ ಅಂಗಡಿಗಳ ತೆರವುಗೊಳಿಸಬೇಕಾಗಿ ಸೂಚಿಸಿದ ಹಿನ್ನೆಲೆ ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದಿಢೀರ್ ದಾಳಿ ನಡೆಸಿ ಅಲ್ಲಿದ್ದ ಕೋಳಿ ಅಂಗಡಿಗಳ ಬಾಗಿಲು ಹಾಕಿಸಿ ಬೀಗಮುದ್ರೆ ಹಾಕಿಸಲಾಯಿತು.

ಮಾತಿನ ಚಕಮಕಿ:

ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಅಂಗಡಿಗಳ ಮಾಲೀಕರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪುರಸಭೆಯಿಂದ ಯಾವುದಾದರೂ ಕೋಳಿ ಅಂಗಡಿಗೆ ಅನುಮತಿ ನೀಡಿದ್ದರೆ ದಾಖಲೆಗಳನ್ನು ತನ್ನಿ ಇಲ್ಲದಿದ್ದರೆ ಕಾನೂನು ಹೋರಾಟ ಎದುರಿಸಿ ಎಂದರು.

ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ, ‘ಇಂದು ಹಲವಾರು ವರ್ಷಗಳಿಂದ ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು ಇಂದಿನ ಸಭೆಯಲ್ಲೂ ನಿರ್ಣಯವಾಗಿದ್ದು ಸಾರ್ವಜನಿಕರ ಹಿತದೃಷ್ಟಿ ಹಾಗೂ ಸಮುದಾಯ ಭವನದ ಪಕ್ಕದಲ್ಲೇ ಇರುವುದರಿಂದ ಇವುಗಳನ್ನು ತೆರವುಗೊಳಿಸುವಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದ್ದು ಇಲ್ಲಿ ಕೋಳಿ ಅಂಗಡಿಗಳಿಗೆ ಅನುಮತಿ ನೀಡದೆ ಬೇರೆ ರೀತಿಯ ವ್ಯಾಪಾರ ವಹಿವಾಟು ಮಾಡಲು, ನಡೆಸಲು ಸೂಚನೆ ನೀಡಿದ್ದು, ಅವರ ಟೆಂಡರ್ ಮುಗಿದಿದೆ. ಇಲ್ಲಿ ಯಾವುದೇ ಕೋಳಿ ಅಂಗಡಿಗಳನ್ನು ನಡೆಸಲು ಅವಕಾಶವಿಲ್ಲ’ ಎಂದು ಹೇಳಿದರು.

ಪಟಾಕಿ ಸಿಡಿಸಿ ಸಿಹಿ ಹಂಚಿದ ದಲಿತ ಸಂಘಟನೆಗಳು:

ಕೋಳಿ ಅಂಗಡಿಗಳ ಬಾಗಿಲು ಮುಚ್ಚಿ ಬೀಗ ಹಾಕುತ್ತಿದ್ದಂತೆ ದಲಿತ ಸಂಘಟನೆ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿದರು

ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ್, ‘ಅಂಬೇಡ್ಕರ್ ಆಶಯದಂತೆ ಸಂವಿಧಾನದ ಉಳಿವಿಗಾಗಿ ಕ್ರಮ ಕೈಗೊಂಡ ದಿಟ್ಟ ಮಹಿಳೆಯರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಸುಮಾರು ೩೦ ವರ್ಷ ಇತಿಹಾಸದಲ್ಲಿ ಕೋಳಿ ಅಂಗಡಿ ತೆರವುಗೊಳಿಸುವ ವಿಚಾರದಲ್ಲಿ ಕೇವಲ ಕಣ್ಣೊರೆಸುವ ನಾಟಕವಾಡುತ್ತಿದ್ದರು. ಆದರೆ ಶಾಸಕ ಎಚ್.ಕೆ.ಸುರೇಶ್, ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ. ಇನ್ನು ಮುಂದೆ ಯಾರೇ ಅಂಗಡಿಗಳನ್ನು ತೆರಯಲು ಮುಂದಾದರೆ ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ಮಹೇಶ್, ಶಂಬುಗನಹಳ್ಳಿ ಬಾಬು, ಕರವೇ ಅಧ್ಯಕ್ಷ ಚಂದ್ರುಶೇಖರ್, ಹರೀಶ್, ಎಂಜಿ ವೆಂಕಟೇಶ್, ಮಲ್ಲಿಕಾರ್ಜುನ, ಪುಟ್ಟರಾಜು, ಈಶ್ವರ ಪ್ರಸಾದ್‌, ಮಂಜುನಾಥ್ ಇದ್ದರು.

ಬದಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿ

‘೨೦ ವರ್ಷಗಳಿಂದ ಇಲ್ಲಿ ಕೋಳಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ಅನುಮತಿ ಇತ್ತು, ಇದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ನಮಗೆ ಬದಲಿ ವ್ಯವಸ್ಥೆ ಮಾಡಿಕೊಟ್ಟರೆ ನಾವು ಬೇರೆಡೆಗೆ ಹೋಗುತ್ತೇವೆ’ ಎಂದು ಕೋಳಿ ವ್ಯಾಪಾರಿ ಶಿವು ಹೇಳಿದರು. ಬೇಲೂರಿನ ಅಂಬೇಡ್ಕರ್‌ ಭವನದ ಅಕ್ಕಪಕ್ಕದಲ್ಲಿದ್ದ ಕೋಳಿ ಅಂಗಡಿಗಳಿಗೆ ಪುರಸಭೆ ಅಧ್ಯಕ್ಷೆ ಮೀನಾಕ್ಷಿ ನೇತೃತ್ವದಲ್ಲಿ ಬೀಗ ಹಾಕಿಸಲಾಯಿತು,.