ಸಾರಾಂಶ
ಕಾರವಾರ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ಅನಧಿಕೃತವಾಗಿ ಮದ್ಯ, ಮಾದಕ ವಸ್ತುಗಳು, ನಗದು ಮತ್ತು ಮತದಾರರಿಗೆ ಉಚಿತ ಉಡುಗೊರೆ ನೀಡುವ ಯಾವುದೇ ಸರಕುಗಳ ಸಾಗಾಣಿಕೆ ಆಗದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಗೋವಾ ರಾಜ್ಯದ ಮೂಲಕ ಜಿಲ್ಲೆಗೆ ಅನಧಿಕೃತವಾಗಿ ಮತ್ತು ಕಳ್ಳ ಸಾಗಾಣಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಾಗಾಣಿಕೆ ಆಗುವ ಸಾಧ್ಯತೆಗಳಿದ್ದು, ಗಡಿಯಲ್ಲಿ ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸಬೇಕು ಎಂದರು.ಗೋವಾ ಗಡಿಯಿಂದ ಜಿಲ್ಲೆಯೊಳಗೆ ಅರಣ್ಯ ಮೂಲಕ ಕಾಲುದಾರಿಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮಾಡುವವರ ವಿರುದ್ದ ಕೂಡಾ ಹೆಚ್ಚು ನಿಗಾ ಇರಿಸಬೇಕು ಎಂದು ಗೋವಾ ರಾಜ್ಯದ ಅಧಿಕಾರಿಗಳಿಗೆ ಹೇಳಿದರು.
ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಅರಣ್ಯದ ಮೂಲಕ ತಲೆ ಮೇಲೆ ಸರಕು ಹೊತ್ತು ಬರುವವರ ಬಗ್ಗೆ ಕೂಡಾ ಪರಿಶೀಲಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿ, ತಪಾಸಣೆಯನ್ನು ಬಿಗಿಗೊಳಿಸಬೇಕು.ಸಮುದ್ರದ ಮೂಲಕ ಮದ್ಯ ಸಾಗಾಟ ಮಾಡುವವರ ವಿರುದ್ಧ ಜಿಲ್ಲೆಯ ಕರಾವಳಿ ಕಾವಲು ಪಡೆ ಪರಿಶೀಲಿಸಲಿದ್ದು, ಗೋವಾ ಮೂಲಕ ಜಿಲ್ಲೆಯ ಕಡೆ ಸಂಚರಿಸುವ ಅನುಮಾನಸ್ಪದ ಬೋಟುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ರೈಲುಗಳಲ್ಲಿ ಕೂಡಾ ಅಬಕಾರಿ ಮತ್ತು ರೈಲ್ವೆ ಪೊಲೀಸ್ ರಿಂದ ಹೆಚ್ಚಿನ ತಪಾಸಣೆ ನಡೆಸಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆಯ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕಾರ್ಯ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ನಿಯೋಜಿಸುತ್ತಿದ್ದು, ಜಿಲ್ಲೆಯ ಮೂಲಕ ಗೋವಾ ರಾಜ್ಯಕ್ಕೆ ಅನಧಿಕೃತವಾಗಿ ಯಾವುದೇ ಮದ್ಯ, ಮಾದಕ ವಸ್ತು ಹಾಗೂ ಸರಕುಗಳ ಸಾಗಾಣಿಕೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಗದಿತ ಮಿತಿಗಿಂತ ಹೆಚ್ಚಿನ ನಗದು ಮೊತ್ತವನ್ನು ಸಾಗಾಟ ಮಾಡುವವರ ಬಗ್ಗೆ ಹಾಗೂ ಮಾದಕ ವಸ್ತುಗಳ ಸರಬರಾಜು ಮಾಡುವವರ ವಿರುದ್ಧ ಕೂಡಾ ಎರಡೂ ಜಿಲ್ಲೆಗಳ ಅಧಿಕಾರಿಗಳು ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು. ಗೋವಾದ ರಾಜ್ಯದ ಅಧಿಕಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್, ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದು , ಪರಸ್ಪರ ಸಮನ್ವಯದಿಂದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಮುಕ್ತ ಮತ್ತು ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.ಈಗಾಗಲೇ ಜಿಲ್ಲೆಯ ಅಂತಾರಾಜ್ಯ ಗಡಿ ಪ್ರದೇಶವಾದ ಕಾರವಾರ ತಾಲೂಕಿನ ಮಾಜಾಳಿ, ಜೋಯಿಡಾ ತಾಲೂಕಿನ ಅನಮೋಡನಲ್ಲಿ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಕಾರವಾರ ತಾಲೂಕಿನ ಮೈಂಗಿಣಿ ಚೆಕ್‌ಪೋಸ್ಟ್ ಶೀಘ್ರದಲ್ಲಿ ಕಾರ್ಯರಂಭಗೊಳ್ಳಲಿದೆ ಎಂದರು.
ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಿ ಸಿ.ಟಿ. ಜಯಕುಮಾರ್, ಅಬಕಾರಿ ಮತ್ತು ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇದ್ದರು.