ತಮ್ಮ ಮೇಲಿನ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ತಮ್ಮ ಮೇಲಿನ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಮ್ಮ ವಿರುದ್ಧ ನಡೆಸುತ್ತಿರುವ ವಿಚಾರಣೆಗಳಲ್ಲಿ ಪಕ್ಷಪಾತದ ಧೋರಣೆ ತೋರುತ್ತಿದೆ. ಹೀಗಾಗಿ, ಈ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ಸೆ.24ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಈ ಅರ್ಜಿಯನ್ನು ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಪ್ರಜ್ವಲ್‌, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಗುರುವಾರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕೆಳ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯಗಳನ್ನು ಅವಲೋಕಿಸಿದಾಗ, ಅವರು ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಪ್ರಸ್ತುತ ಕೇಸ್‌ನಲ್ಲಿ ಹಾಜರುಪಡಿಸುವ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಧೀಶರು ತೀರ್ಪು ನೀಡಬೇಕೇ ವಿನಃ ಹಿಂದಿನ ಕೇಸ್ ತೀರ್ಪಿನ ಆಧಾರದ ಮೇಲೆ ಅಲ್ಲ ಎಂದು ಪೀಠ ಹೇಳಿದೆ.

ಈ ವ್ಯಕ್ತಿ ಸುಪ್ರೀಂಕೋರ್ಟ್‌ಗೆ ಹೋಗಿ ಜಿಲ್ಲಾ ಕೋರ್ಟ್ ವಿರುದ್ಧ ಆದೇಶ ಪಡೆದಿದ್ದಾರೆ ಎಂಬ ಸಂದೇಶ ಕಳಿಸಲು ಸಾಧ್ಯವಿಲ್ಲ. ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಸಹ ನಾವು ಉನ್ನತ ಮಟ್ಟದಲ್ಲಿ ಇಡಬೇಕು. ಅಲ್ಲದೆ, ಪ್ರಕರಣದ ಮೇಲ್ಮನವಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗ ಈ ಎಲ್ಲಾ ವಿಚಾರಗಳನ್ನು ಹೈಕೋರ್ಟ್‌ನಲ್ಲಿಯೇ ನೀವು ಪ್ರಶ್ನಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.