ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ (ಪಿಆರ್‌ಸಿ) ಕೊಡಲು ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಿಆರ್‌ಸಿ ಕೊಡಲು ಅಧಿಕಾರ ಕೊಟ್ಟವರು ಯಾರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯಾ ಸೇರಿದಂತೆ ಇನ್ನಿತರೆ ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವ ಜನರು ರಾಜ್ಯದಲ್ಲಿ ನೆಲೆಸಿದ್ದಾರೆ. ಇವರೆಲ್ಲಾ ಕಾಂಗ್ರೆಸ್ ಮತದಾರರಾಗಿದ್ದಾರೆ. ಆದ್ದರಿಂದ ಇವರಿಗೆ ಪಿಆರ್‌ಸಿ ಕೊಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ಹುಡುಗಾಟ ಆಡುತ್ತಿದೆ. ಓಟ್ ಬ್ಯಾಂಕ್‌ಗಾಗಿ ಪಿಆರ್‌ಸಿ ಕೊಡುತ್ತಿದ್ದು, ಬೇರೆ ರಾಜ್ಯಗಳಲ್ಲಿ ಕೊಡುತ್ತಿಲ್ಲ. ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಅನುಮತಿ ಕೊಟ್ಟಿದೆಯೇ. ಅಷ್ಟಕ್ಕೂ ದೇಶದ ಪೌರತ್ವ ಕೊಡುವ ಹಕ್ಕು ಕೇಂದ್ರ ಸರ್ಕಾರಕ್ಕಿದೆಯೇ ವಿನಃ ರಾಜ್ಯಸರ್ಕಾರಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಓಟ್ ಚೋರಿ ಎಂದು ಬೊಬ್ಬೆ ಹೊಡೆಯುವವರು ಎಲ್ಲಿದ್ದಾರೆ?:

ಸಂವಿಧಾನ ಪುಸ್ತಕ ಇಟ್ಟುಕೊಂಡು ಓಡಾಡುವ ಇವರು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ನೀತಿಯನ್ನೇ ಬದಲಾಯಿಸಲು ಹೊರಟಿದ್ದಾರೆ. ಓಟ್ ಚೋರಿ ಎಂದು ಬೊಬ್ಬೆ ಹೊಡೆಯುವವರು ಇದಕ್ಕೆ ಏನಂತಾರೆ ಎಂದು ಪ್ರಶ್ನಿಸಿದರು.


ರೆವಿನ್ಯೂ ಇನ್‌ಸ್ಪೆಕ್ಟರ್‌ಗಳು ₹೩ ಸಾವಿರ ಪಡೆದು ಅಕ್ರಮ ವಲಸಿಗರಿಗೆ ಪಿಆರ್‌ಸಿ ಕೊಡುತ್ತಿದ್ದಾರೆ. ಅಕ್ರಮ ವಲಸಿಗರಿಂದ ಬಾಂಬ್ ಸ್ಫೋಟ, ಹಲ್ಲೆ ಸೇರಿದಂತೆ ಆಂತರಿಕ ಗಲಭೆಗಳಾದರೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ:

ದೇಶದ ಭದ್ರತೆಗೆ ಅಪಾಯವಿದೆ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಿಆರ್‌ಸಿ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದ ಹಿತಾಸಕ್ತಿಯಿಂದ ಸಂವಿಧಾನ ರಕ್ಷಿಸುವುದು ನಮ್ಮ ಕರ್ತವ್ಯ. ಕೂಡಲೇ ಪಿಆರ್‌ಸಿ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲವಾದರೆ ರಾಜ್ಯಪಾಲರನ್ನು ಭೇಟಿ ಮಾಡಿ ಪಿಆರ್‌ಸಿಯನ್ನು ರದ್ದು ಮಾಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಡಿಕೆಶಿ ಹಿಂದೂ ಮುಖವಾಡ ಹಾಕಿಕೊಂಡಿದ್ದಾರೆ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳಗ್ಗೆ ಎದ್ದರೆ ಸಾಕು ದೇವಸ್ಥಾನಗಳಿಗೆ ಹೋಗುತ್ತಾರೆ. ಆದರೆ, ಇವರು ಅನುಕೂಲ ಮಾಡಿಕೊಡುತ್ತಿರುವುದೆಲ್ಲ ಮುಸಲ್ಮಾನರಿಗೆ. ತೋರಿಕೆಗೆ ಮಾತ್ರ ದೇವಸ್ಥಾನಗಳಿಗೆ ಹೋಗುತ್ತಿದ್ದು, ಹಿಂದೂ ಮುಖವಾಡ ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಇಂದ್ರೇಶ್, ಮುಖಂಡರಾದ ಎಸ್.ಸಚ್ಚಿದಾನಂದ, ಲಕ್ಷ್ಮೀ ಅಶ್ವಿನ್‌ಗೌಡ ಇತರರಿದ್ದರು.

------ಬೀದಿಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಲಿ

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲು ಪರ್ಯಾಯ ವ್ಯವಸ್ಥೆ ಮಾಡಿ ನಂತರ ತೆರವು ಮಾಡುವುದು ಒಳಿತು. ಕಾರ್ಪೋರೇಷನ್ ಅವರು ಈ ಹಿಂದೆ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ನೀಡಿದ್ದಾರೆ. ತೆರವು ಮಾಡಿಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ, ಅವರಿಗೆ ಮೊದಲು ಬದಲಿ ವ್ಯವಸ್ಥೆ ಮಾಡುವುದು ಸೂಕ್ತ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

-----

ಕಾಂಗ್ರೆಸ್ ರೈತ ವಿರೋಧಿ ಸರ್ಕಾರ: ಆರ್.ಅಶೋಕ್

ಒಂದೆಡೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಬಿಡುತ್ತಿಲ್ಲ, ಮತ್ತೊಂದೆಡೆ ಬಿಡದಿ ಭಾಗದಲ್ಲಿ ರೈತರ ಕೃಷಿ ಭೂಮಿಯನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳಲಾಗುತ್ತಿದೆ. ಒಟ್ಟಾರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಆರ್. ಅಶೋಕ್ ಆರೋಪಿಸಿದರು.

ಕೆ.ಆರ್.ಎಸ್.ನಲ್ಲಿ ಪ್ರಸ್ತುತ ೯೦ ಅಡಿ ನೀರಿದ್ದರೂ ಒಣಗುತ್ತಿರುವ ಬೆಳೆಗಳಿಗೆ ರೈತರು ನೀರು ಕೊಡಿ ಎಂದು ಹೋರಾಟ ಮಾಡುತ್ತಿದ್ದರೂ ನಾಲೆಗಳಿಗೆ ನೀರು ಹರಿಸದೆ, ಕದ್ದುಮುಚ್ಚಿ ನೆರೆಯ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಈ ಹಿಂದೆ ೭೪ ಅಡಿ ನೀರಿದ್ದಾಗಲೂ ನಾಲೆಗಳಿಗೆ ನೀರು ಹರಿಸಿರುವ ಉದಾಹರಣೆಗಳಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಸಹಭಾಗಿತ್ವದ ಸರ್ಕಾರ ಇರುವುದರಿಂದ ಅಲ್ಲಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಬಿಟ್ಟು ಇಲ್ಲಿಯ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳೆ ಬೆಳೆಯಬೇಡಿ ಎಂದು ಹೇಳಿದ್ದಾರೆ. ಬೆಳೆ ಬೆಳೆಯದೆ ರೈತರು ಏನು ಮಾಡಬೇಕು? ಎಷ್ಟು ಪರಿಹಾರ ಕೊಡುತ್ತೀರಾ? ಅದನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ₹೧೦ ಸಾವಿರ ಕೋಟಿ ಕೊಡಬೇಕೆಂದು ರಾಜ್ಯದ ಸಚಿವರೊಬ್ಬರು ಕೇಳಿದ್ದಾರೆ. ‘ಬರ’ ಎಂದು ಘೋಷಿಸುವ ಮೊದಲೇ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಟ್ಟಿದೆಯೇ ಎಂದು ಪ್ರಶ್ನಿಸಿದ ಆರ್.ಅಶೋಕ್, ಮೊದಲು ‘ಬರ’ ಎಂದು ಘೋಷಣೆ ಮಾಡಲಿ, ಘೋಷಣೆ ಮಾಡುವ ಮೊದಲೇ ಹೇಗೆ ಹಣ ಕೊಡಿ ಎಂದು ಕೇಳುತ್ತಾರೆ? ನಾಚಿಕೆ ಆಗೋಲ್ಲವೇ ಎಂದು ಛೇಡಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕೇವಲ ಶೇ.೫ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆ ಬಿತ್ತನೆ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಯಿತು. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಕೃಷಿ, ಪಶು ಇಲಾಖೆ ಸಚಿವರನ್ನು ನೇಮಕ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಎಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭಯ ಡಿ.ಕೆ. ಶಿವಕುಮಾರ್ ಅವರಿಗೆ ಕಾಡುತ್ತಿದೆ ಎಂದು ಟೀಕಿಸಿದರು.