ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ನೇ ಜಯಂತ್ಯುತ್ಸವಕ್ಕೆ ಮಳವಳ್ಳಿ ಪಟ್ಟಣ ಸಂಪೂರ್ಣ ಸಜ್ಜಾಗಿದೆ. ಪಟ್ಟಣದಲ್ಲಿ ಕಮಾನುಗಳನ್ನು ನಿರ್ಮಿಸಿ ಭಕ್ತರಿಗೆ ಸ್ವಾಗತ ಕೋರಲಾಗಿದೆ. ಎಲ್ಲೆಡೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ನೇ ಜಯಂತ್ಯುತ್ಸವಕ್ಕೆ ಮಳವಳ್ಳಿ ಪಟ್ಟಣ ಸಂಪೂರ್ಣ ಸಜ್ಜಾಗಿದೆ. ಪಟ್ಟಣದಲ್ಲಿ ಕಮಾನುಗಳನ್ನು ನಿರ್ಮಿಸಿ ಭಕ್ತರಿಗೆ ಸ್ವಾಗತ ಕೋರಲಾಗಿದೆ. ಎಲ್ಲೆಡೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಂಗಳವಾರ (ಡಿ.೧೬) ಮಧ್ಯಾಹ್ನ ೩.೧೫ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಯಂತಿ ಮಹೋತ್ಸವ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಹಿಸುವರು. ಸ್ಮರಣ ಸಂಚಿಕೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಚಲುವರಾಯಸ್ವಾಮಿ ಬಿಡುಗಡೆಗೊಳಿಸುವರು. ವಿಶೇಷ ಆಹ್ವಾನಿತರಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪಾಲ್ಗೊಳ್ಳುವರು ಎಂದರು.

ಸಂಜೆ ೫ ಗಂಟೆಗೆ ನಡೆಯಲಿರುವ ಸಾವಯವ ಕೃಷಿ-ಸಿರಿಧಾನ್ಯ ಮತ್ತು ಉತ್ಪನ್ನಗಳು ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರವನ ಆಶ್ರಮದ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ವಹಿಸುವರು. ಆರ್ಗ್ ಟ್ರೀ ಸಿಇಒ ಬಿ.ಮಹೇಶ್ ತೆಂಕಹಳ್ಳಿ ಉಪನ್ಯಾಸ ನೀಡುವರು ಎಂದರು.

ಸುತ್ತೂರು ಅತಿ ಪುರಾತನ ಮಠಗಳಲ್ಲಿ ಒಂದಾಗಿದ್ದು, ಜನಪರ ಕಾಳಜಿ, ಮೌಲ್ಯ, ಶೈಕ್ಷಣಿಕವಾಗಿ ಅನೇಕ ಸುಧಾರಣೆಗಳನ್ನು ಮಾಡುತ್ತಾ ಬಂದಿದೆ. ಸಮಾಜದ ಮೂಢನಂಬಿಕೆಯನ್ನು ಹೋಗಲಾಡಿಸಿ ಅನೇಕರಿಗೆ ಆಶ್ರಯ ನೀಡಿದೆ. ಜಯಂತ್ಯುತವದ ಅಂಗವಾಗಿ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿ ಸುತ್ತೂರು ಕ್ಷೇತ್ರದಿಂದ ಟಿ.ನರಸೀಪುರ, ಬೆಳಕವಾಡಿ ಮಾರ್ಗವಾಗಿ ಮಳವಳ್ಳಿ ತಲುಪಲಿದೆ ಎಂದರು.

ಐದು ದಿನಗಳ ಕಾಲ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಅನೇಕ ನಾಟಕಗಳ ಪ್ರದರ್ಶನ, ಉಪನ್ಯಾಸ, ವಾದ್ಯಗೋಷ್ಠಿ, ಸಂಗೀತ ಸಂಜೆ, ವಚನ ನೃತ್ಯ ರೂಪಕ, ಹಾಸ್ಯ ಕಾರಂಜಿ, ಭಕ್ತಿ ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಡಿ.೨೧ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ತುಮಕೂರು ಶ್ರೀಸಿದ್ಧಗಂಗಾಮಠದ ಶ್ರೀಸಿದ್ಧಲಿಂಗ ಮಹಾ ಸ್ವಾಮಿಗಳು, ರಾಜನಹಳ್ಳಿ ಶ್ರೀವಾಲ್ಮೀಕಿ ಪೀಠದ ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡುವರು. ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಎಚ್.ಸಿ.ಮಹದೇವಪ್ಪ, ಈಶ್ವರ್ ಬಿ.ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್, ಲಕ್ಷ್ಮೀ ಆರ್.ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್‌ಗೂಳಿಗೌಡ ವಿವಿಧ ಮಠಗಳ ಮಠಾಧೀಶರು ಭಾಗವಹಿಸುವರು.

ಜಯಂತ್ಯುತ್ಸವ ಒಂದು ಧಾರ್ಮಿಕ ಸಮಾರಂಭ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಎಲ್ಲ ವರ್ಗದ ಜನರನ್ನು ಸಮಾನರೆಂದು ಭಾವಿಸಿ ವೈಶಿಷ್ಟ್ಯಪೂರ್ಣವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸುತ್ತೂರು ಮಠದ ಭಕ್ತರೇ ಕಾರ್ಯಕ್ರಮದಲ್ಲಿ ಚಪ್ಪರ ಹಾಕಿ ಮಳವಳ್ಳಿ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಾರೇಹಳ್ಳಿ ಹೆಲಿಪ್ಯಾಡ್‌ನಲ್ಲಿ ೩ ಹೆಲಿಕಾಪ್ಟರ್ ನಿಲ್ಲುವಂತೆ ಜಾಗ ಗುರುತಿಸಲಾಗಿದೆ. ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಎಸ್‌ಪಿ, ನಾಲ್ಕು ಮಂದಿ ಡಿವೈಎಸ್ಪಿ ಸೇರಿದಂತೆ ೧೦೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ೧೦೦ ಮಳಿಗೆಗಳನ್ನು ತೆರೆದಿದ್ದು, ೫೦ ಮಳಿಗೆಗಳನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರತಿನಿತ್ಯ ದಾಸೋಹ ನೀಡಲಾಗುವುದು ಎಂದರು.

ಕನಕಪುರದ ದೇಗುಲಮಠದ ಕಿರಿಯ ಶ್ರೀಡಾ.ಚನ್ನಬಸವ ಸ್ವಾಮೀಜಿ, ಸುತ್ತೂರು ಶ್ರೀ ಮಠದ ಕಾರ್ಯದರ್ಶಿ ಮಂಜುನಾಥ್ ಬುದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಮಂಡ್ಯ

ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ನೇ ಜಯಂತ್ಯುತ್ಸವಕ್ಕೆ ಬರುವ ಸಾರ್ವಜನಿಕರಿಗೆ ಆರು ದಿನಗಳ ಕಾಲ ಭೋಜನ ವ್ಯವಸ್ಥೆ ಆಯೋಜಿಸಲಾಗಿದೆ. ರಾಜ್ಯದ ಪ್ರಸಿದ್ಧ ಅಪೂರ್ವ ವೆಜ್ ಕೆಟರಿಂಗ್ ಅವರಿಂದ ಕಾರ್ಯಕ್ರಮಕ್ಕೆ ಬರುವ ಸಹಸ್ರಾರು ಭಕ್ತ ಜನರಿಗೆ ನಿತ್ಯ ಭೋಜನ ಸಿದ್ಧಪಡಿಸಲಾಗುತ್ತಿದೆ. ಪ್ರತಿದಿನ ೨೦ ರಿಂದ ೨೫ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ೪೦೦ ಬಾಣಸಿಗರು ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಡಿ.೧೬: ಬೆಳಗ್ಗೆ- ವಾಂಗೀಬಾತ್, ಕೇಸರಿ ಬಾತು, ರವೆ ಉಪ್ಪಿಟ್ಟು, ಮಧ್ಯಾಹ್ನ - ಬಿಸಿಬೇಳೆ ಬಾತ್, ಕಾರಾಬೂಂದಿ, ಮೊಸರನ್ನ, ಡ್ರೈ ಜಾಮೂನು, ರಾತ್ರಿ - ಹೋಳಿಗೆ, ತುಪ್ಪ, ಅನ್ನ ಸಾಂಬಾರ್, ಗಟ್ಟಿ ಮಜ್ಜಿಗೆ.

ಡಿ.೧೭: ಬೆಳಗ್ಗೆ- ಖಾರಾ ಪೊಂಗಲ್, ಸಿಹಿ ಪೊಂಗಲ್, ಹುಳಿಗೊಜ್ಜು. ಮಧ್ಯಾಹ್ನ - ಶ್ಯಾವಿಗೆ ಪಾಯಸ, ತೊಂಡೆಕಾಯಿಪಲ್ಯ, ಅನ್ನ, ಸಾಂಬಾರ್, ಗಟ್ಟಿಮಜ್ಜಿಗೆ, ರಾತ್ರಿ- ಮೈಸೂರು ಪಾಕ್, ಟಮೋಟೋಬಾತ್, ಮೊಸರನ್ನ.

ಡಿ.೧೮: ಬೆಳಗ್ಗೆ- ರವೆ ವಾಂಗಿಬಾತ್, ಟಮೋಟೋಬಾತ್, ಚಟ್ನಿ. ಮಧ್ಯಾಹ್ನ ಅಕ್ಕಿಪಾಯಸ, ಕೋಸಂಬರಿ, ಅನ್ನ, ಸಾಂಬಾರ್, ಗಟ್ಟಿಮಜ್ಜಿಗೆ, ರಾತ್ರಿ- ಬೆಲ್ಲದ ಮಿಠಾಯಿ, ವಾಂಗಿಬಾತ್, ಮೊಸರನ್ನ.

ಡಿ.೧೯: ಬೆಳಗ್ಗೆ- ತರಕಾರಿ ಪಲಾವ್, ಶ್ಯಾವಿಗೆ ಬಾತು, ಚಟ್ನಿ. ಮಧ್ಯಾಹ್ನ- ಸಬ್ಬಕ್ಕಿ ಪಾಯಸ, ಬೀಟ್‌ರೂಟ್ ಪಲ್ಯ, ಅನ್ನ-ಸಾಂಬಾರ್, ಗಟ್ಟಿ ಚಟ್ನಿ, ರಾತ್ರಿ- ಜಹಂಗೀರ್, ವೆಜಿಟೇಬಲ್ ಪಲಾವ್, ಮೊಸರನ್ನ.

ಡಿ.೨೦: ಬೆಳಗ್ಗೆ- ಅಕ್ಕಿ ಉಪ್ಪಿಟ್ಟು, ಕೇಸರಿಬಾತ್, ಚಟ್ನಿ. ಮಧ್ಯಾಹ್ನ- ಗೋಧಿ ಪಾಯಸ, ಕೋಸು ಕಡ್ಲೆಬೇಳೆ ಪಲ್ಯ, ಅನ್ನ-ಸಾಂಬಾರ್. ರಾತ್ರಿ- ಹಾರ್ಲಿಕ್ಸ್ ಬರ್ಫಿ, ಮೆಂತ್ಯ ಬಾತ್, ಮೊಸರನ್ನ.

ಡಿ.೨೧: ವಾಂಗಿಬಾತು, ಅವಲಕ್ಕಿ ಉಪ್ಪಿಟ್ಟು, ಚಟ್ನಿ. ಮಧ್ಯಾಹ್ನ- ಹೆಸರುಬೇಳೆ ಪಾಯಸ, ಸುವರ್ಣಗೆಡ್ಡೆ ಪಲ್ಯ, ಅನ್ನ-ಸಾಂಬಾರ್. ರಾತ್ರಿ- ಲಾಡು, ನಿಂಬೆಹಣ್ಣಿನ ಚಿತ್ರಾನ್ನ, ಮೊಸರನ್ನ.

ಡಿ.೨೨: ಖಾರಪೊಂಗಲ್, ಸಿಹಿಪೊಂಗಲ್, ಹುಳಿಗೊಜ್ಜು