ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಹೋರಾಟ ಸಮಿತಿ ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ.೧೭ರಂದು ಸಾಗರ ಬಂದ್‌ಗೆ ಕರೆ ಕೊಟ್ಟಿದೆ. ಸಾಗರ ಜಿಲ್ಲೆಗಾಗಿ ಕಳೆದ ಮೂರುನಾಲ್ಕು ತಿಂಗಳಿನಿಂದ ಬೇರೆ ಬೇರೆ ರೀತಿಯ ಹೋರಾಟಗಳು ನಡೆದಿದ್ದರೂ, ಅದರಿಂದ ಯಾವುದೆ ಪ್ರಯೋಜನವಾಗದ್ದರಿಂದ ಹೋರಾಟ ಸಮಿತಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಖಂಡಿಸಿ ಬಂದ್‌ಗೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಸಾಗರ

ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಹೋರಾಟ ಸಮಿತಿ ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ.೧೭ರಂದು ಸಾಗರ ಬಂದ್‌ಗೆ ಕರೆ ಕೊಟ್ಟಿದೆ. ಸಾಗರ ಜಿಲ್ಲೆಗಾಗಿ ಕಳೆದ ಮೂರುನಾಲ್ಕು ತಿಂಗಳಿನಿಂದ ಬೇರೆ ಬೇರೆ ರೀತಿಯ ಹೋರಾಟಗಳು ನಡೆದಿದ್ದರೂ, ಅದರಿಂದ ಯಾವುದೆ ಪ್ರಯೋಜನವಾಗದ್ದರಿಂದ ಹೋರಾಟ ಸಮಿತಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಖಂಡಿಸಿ ಬಂದ್‌ಗೆ ಮುಂದಾಗಿದೆ.

೭೦ ವರ್ಷಗಳಿಂದ ಸಾಗರ ಉಪವಿಭಾಗ ಕೇಂದ್ರವಾಗಿದೆ. ಈಗಾಗಲೇ ಉಪವಿಭಾಗ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದ ಮೇಲೆ ಮುಂದಿನ ಹಂತವೆಂದರೆ ಜಿಲ್ಲೆಯಾಗುವುದು. ಅಲ್ಲದೆ ಡಿಎಫ್ಓ ಕಚೇರಿ ಸೇರಿದಂತೆ ಹಲವು ಪ್ರಮುಖ ಕಚೇರಿಗಳು ಹಲವು ವರ್ಷಗಳಿಂದ ಸಾಗರದಲ್ಲಿ ಸೇವೆಯಲ್ಲಿವೆ. ಇಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಉಪವಿಭಾಗೀಯ ಆಸ್ಪತ್ರೆಗಳಿಗೆ ಹೊರ ತಾಲೂಕುಗಳಿಂದಲೂ ಜನ ಬರುತ್ತಾರೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಸಾಗರಕ್ಕೆ ಜಿಲ್ಲೆಯಾಗುವ ಎಲ್ಲ ಅರ್ಹತೆ ಇರುವುದರಿಂದ ನಾವು ಹಕ್ಕೊತ್ತಾಯ ಮಾಡುತ್ತಿದ್ದೇವೆ ಎನ್ನುತ್ತಾರೆ ಹೋರಾಟ ಸಮಿತಿಯ ಮುಖ್ಯಸ್ಥ ತೀ.ನಾ.ಶ್ರೀನಿವಾಸ್.

ಮಲೆನಾಡಿನ ಕೇಂದ್ರಸ್ಥಾನವಾಗಿರುವ ಸಾಗರ ಲಾಗಾಯ್ತಿನಿಂದಲೂ ಪ್ರಭುತ್ವದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನ ರೈತರ ಸಮಸ್ಯೆ, ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಸರ್ಕಾರ ಮಲೆನಾಡು ಭಾಗದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ಡಿ. ಕೊನೆಯೊಳಗೆ ಹೊಸ ಜಿಲ್ಲೆ, ತಾಲೂಕುಗಳ ಪ್ರಸ್ತಾಪವನ್ನು ಕಳಿಸಲು ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಕಳಿಸಿದೆ. ಆದರೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡುವ ಪ್ರಸ್ತಾಪ ಕಾಣುತ್ತಿಲ್ಲ. ಕೇಂದ್ರ ಸರ್ಕಾರವೇ ಹೊಸ ಜಿಲ್ಲೆ ಘೋಷಣೆಗೆ ಅವಕಾಶ ನೀಡಿರುವಾಗ ಸಾಗರವನ್ನೇ ಜಿಲ್ಲೆ ಮಾಡಬೇಕು ಎನ್ನುವುದು ನಮ್ಮ ಒತ್ತಾಯ ಎಂದು ತೀ.ನಾ.ಶ್ರೀನಿವಾಸ್. ಹೇಳಿದರು.

ಆಡಳಿತ ಜನರಿಗೆ ಹತ್ತಿರವಾಗಬೇಕು ಎನ್ನವುದು ನಮ್ಮ ಸಂವಿಧಾನದ ಪ್ರಮುಖ ಆಶಯ. ಆದರೆ ಭಟ್ಕಳಕ್ಕೆ ಕೆಲವೇ ಕಿ.ಮೀ. ದೂರದಲ್ಲಿರುವ ಅರ್ಕಳ ಎನ್ನುವ ಗ್ರಾಮ ಸಾಗರ ತಾಲೂಕಿಗೆ ಸೇರಿದೆ. ಈ ಭಾಗದ ಜನ ಈಗ ಜಿಲ್ಲಾ ಕೇಂದ್ರವಾಗಿರುವ ಶಿವಮೊಗ್ಗಕ್ಕೆ ಹೋಗಬೇಕೆಂದರೆ ನೂರಾರು ಕಿ.ಮೀ. ಪ್ರಯಾಣಿಸಬೇಕು. ಸಾಗರ ಜಿಲ್ಲೆಯಾದರೆ ಅವರಿಗೆ ಜಿಲ್ಲಾ ಕೇಂದ್ರ ಹತ್ತಿರವಾಗುವುದರಿಂದ ಅವರ ಕೆಲಸಗಳು ಸುಲಭ ಸಾಧ್ಯವಾಗುತ್ತದೆ. ಅಲ್ಲದೆ ಸಾಗರ ಜಿಲ್ಲಾ ಕೇಂದ್ರವಾದರೆ ಇಲ್ಲಿನ ಸಮಸ್ಯೆಗಳನ್ನು, ಇಲ್ಲಿನ ಹೋರಾಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸುತ್ತದೆ. ಹಾಗಾಗಿ ಸಾಗರ ಜಿಲ್ಲೆಗೆ ಹೋರಾಟ ನಡೆಯುತ್ತಿದ್ದು ಈಗ ಸಾಗರ ಬಂದ್‌ಗೆ ಕರೆನೀಡಿ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ. ಮುಂದೆ ಇನ್ನಷ್ಟು ಉಗ್ರ ಹೋರಾಟಕ್ಕೆ ಸಮಿತಿ ಸಿದ್ಧವಾಗಿದೆ ಎನ್ನುತ್ತಾರೆ ತೀ.ನ.ಶ್ರೀನಿವಾಸ್.

ಸಾಗರ ಬಂದ್‌ಗೆ ಸಂಬಂಧಿಸಿದಂತೆ ಹೋರಾಟ ಸಮಿತಿಯ ಪ್ರಮುಖರು ಪಟ್ಟಣದ ಅಂಗಡಿ ಮಾಲಿಕರಿಗೆ ಬೆಂಬಲ ನೀಡುವಂತೆ ಕರಪತ್ರ ಹಂಚಿ ಮನವಿ ಮಾಡಿದ್ದಾರೆ. ಪ್ರಮುಖ ಸಂಘ ಸಂಸ್ಥೆಗಳಿಗೆ ಮನವಿ ನೀಡಿದ್ದಾರೆ. ಹೋಟೆಲ್ ಮಾಲಿಕರಿಗೆ, ಆಟೋ ಚಾಲಕ ಸಂಘಕ್ಕೆ, ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಡಿ.೧೭ರಂದು ಬೆಳಗ್ಗೆ ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ. ನಂತರ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.