ಸಾರಾಂಶ
ಭಟ್ಕಳ: ಗೋವಾದ ಗೋಕರ್ಣ ಪರ್ತಗಾಳಿ ಮಠದಲ್ಲಿ ೨೦೨೫ರ ಡಿಸೆಂಬರ್ ತಿಂಗಳಲ್ಲಿ ಆದರ್ಶ ಮಾನವನ ಸಂಕೇತ (ಸಿಂಬಲ್ ಆಫ್ ಐಡಿಯಲ್ ಹ್ಯುಮನ್ ಬಿಯಿಂಗ್) ಶ್ರೀರಾಮಚಂದ್ರನ ೭೭ ಅಡಿ ಎತ್ತರದ ಕಂಚಿನ ವಿಗ್ರಹ ಲೋಕಾರ್ಪಣೆಗೊಳ್ಳಲಿದೆ ಎಂದು ಗೋಕರ್ಣ ಪರ್ತಗಾಳಿ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ತಿಳಿಸಿದರು.ಬೆಂಗಳೂರಿನ ದ್ವಾರಕನಾಥ ಭವನದಲ್ಲಿ ಚಾತುರ್ಮಾಸ ವ್ರತಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಗೋಕರ್ಣ ಪರ್ತಗಾಳಿ ಮಠ ಆರಂಭವಾಗಿ ೨೦೨೫ಕ್ಕೆ ೫೫೦ ಸಂವತ್ಸರ ಪೂರ್ಣವಾಗಲಿದೆ. ಶ್ರೀಮಠಕ್ಕೆ ರಾಮ ದೇವರು ಪ್ರಾಪ್ತವಾಗಿ ೫೫೦ ಸಂವತ್ಸರ ಪೂರ್ತಿಯಾಗಲಿದೆ. ಶ್ರೀಮಠದ ಮಹಾದ್ವಾರದಿಂದ ಮಠದ ವರೆಗಿನ ಸ್ಥಳವೂ ಶ್ರೀರಾಮನ ಬಿಲ್ಲಿನ ರೂಪದಲ್ಲಿ ಕಂಗೊಳಿಸುತ್ತಿದೆ. ಮಠಕ್ಕೆ 550 ಸಂವತ್ಸರ ಪೂರ್ಣವಾದ ಹಿನ್ನೆಲೆ ಪರ್ತಗಾಳಿಯ ಮೂಲ ಮಠದಲ್ಲಿ ನೆಲದಿಂದ ೭೭ ಅಡಿ ಉದ್ದ ಪ್ರಭು ರಾಮಚಂದ್ರನ ಕಂಚಿನ ವಿಗ್ರಹ ನಿರ್ಮಿಸಲಾಗುವುದು ಎಂದರು.
ಬೆಂಗೂಳೂರಿನ ನಿರ್ಮಾತೃ ಕೆಂಪೇಗೌಡರ ವಿಗ್ರಹ ನಿರ್ಮಿಸಿದ, ಅಹ್ಮದಾಬಾದಿನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ಕಂಚಿನ ವಿಗ್ರಹ ನಿರ್ಮಿಸಿದ ಶಿಲ್ಪಿ ರಾಮ ಸುತಾರ ಅವರ ಪುತ್ರ ಅನಿಲ ಸುತಾರ ಅವರು ವಿಗ್ರಹ ನಿರ್ಮಿಸಲಿದ್ದು, ಈಗಾಗಲೆ ಮಾತುಕತೆ ಯಶಸ್ವಿಯಾಗಿದೆ ಎಂದ ಅವರು ಹೇಳಿದರು.ದೇವರ ಮತ್ತು ಗುರುಗಳ ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕು. ದಿನಂಪ್ರತಿ ಜಪ- ಅನುಷ್ಠಾನಗಳನ್ನು ಮಾಡಬೇಕು. ಕಷ್ಟ ಬಂದಾಗ ಮಾತ್ರ ದೇವರ ಸ್ಮರಣೆ ಎನ್ನುವುದಕ್ಕಿಂತ ದಿನಂಪ್ರತಿ ಇದನ್ನು ರೂಢಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದರು.