ಸಾರಾಂಶ
ಕಾರವಾರ: ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಸಾಕಷ್ಟು ಜನರು ಪಾಲ್ಗೊಂಡು ಗಮನ ಸೆಳೆದರು.
ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ, ನಿಖಿಲ ಕುಮಾರಸ್ವಾಮಿ, ಸಿ.ಎನ್. ಮಂಜುನಾಥ, ಕೋಟ ಶ್ರೀನಿವಾಸ ಪೂಜಾರಿ, ಪಿ. ರಾಜೀವ, ವಿ. ಸುನೀಲ್‌ಕುಮಾರ, ಶ್ರೀರಾಮುಲು ಮತ್ತಿತರ ನಾಯಕರೊಂದಿಗೆ ಹೆಜ್ಜೆ ಹಾಕಿದ ರೂಪಾಲಿ ಎಸ್. ನಾಯ್ಕ ಅವರು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದಲಿತರು, ಬಡವರಿಗೆ ಸಿಗಬೇಕಾದ ಸೌಲಭ್ಯವನ್ನು ಲೂಟಿ ಮಾಡಿರುವುದನ್ನು ಖಂಡಿಸಿದರು.ಬಿಜೆಪಿ ಆಡಳಿತದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಯಿಂದ ಆರ್ಥಿಕ ದಿವಾಳಿಯನ್ನು ಮಾಡುತ್ತಿದೆ. ಆಡಳಿತ ನಡೆಸುವ ಯಾವ ಹಕ್ಕನ್ನು ಕಾಂಗ್ರೆಸ್ ಸರ್ಕಾರ ಹೊಂದಿಲ್ಲ. ಭ್ರಷ್ಟಾಚಾರದ ಕೂಪದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು.
ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿರುದ್ಧ ಹಾಗೂ ಸರ್ಕಾರದ ಹಗರಣಗಳ ಹಾಡುಗಳು ಮೊಳಗಿದವು. ಸರ್ಕಾರದ ವಿರುದ್ಧ ಘೋಷಣೆಯೊಂದಿಗೆ ಮೈಸೂರು ಚಲೋ ಪಾದಯಾತ್ರಿಗಳ ಹುಮ್ಮಸ್ಸು ಹೆಚ್ಚುತ್ತಿರುವುದು ಕಂಡುಬಂತು.ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಆರಂಭಗೊಂಡು ರಾಮನಗರದಲ್ಲಿ ಕೊನೆಗೊಂಡಿತು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಹಳಿಯಾಳ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಮಂಡಲದ ಪದಾಧಿಕಾರಿಗಳು, ಪ್ರಮುಖರು, ಮೋರ್ಚಾದವರು, ಕಾರ್ಯಕರ್ತರು ಇದ್ದರು.
ಮೊದಲ ದಿನಕ್ಕಿಂತ ಎರಡನೇ ದಿನದ ಪಾದಯಾತ್ರೆಯಲ್ಲಿ ಕಾರವಾರ, ಅಂಕೋಲಾ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಕಾರ್ಯಕರ್ತರು, ಪದಾಧಿಕಾರಿಗಳ ಸಂಖ್ಯೆ ಹೆಚ್ಚಿತ್ತು.ಈ ಸಂದರ್ಭದಲ್ಲಿ ಉತ್ತರಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ ವೆಂಕಟೇಶ ನಾಯ್ಕ, ಸುನೀಲ್ ಸೋನಿ, ಗೋವಿಂದ ನಾಯ್ಕ, ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಕಾರವಾರ ನಗರ ಮಂಡಲದ ನಾಗೇಶ್ ಕುರ್ಡೇಕರ, ಗ್ರಾಮೀಣ ಮಂಡಲದ ಸುಭಾಷ ಗುನಗಿ, ಪರ್ಬತ್ ನಾಯ್ಕ ಮಹಿಳಾ ಮೋರ್ಚಾ, ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.