ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಮುಂಗಾರು ಹಂಗಾಮಿನ ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಗುಳೇದಗುಡ್ಡ ತಾಲೂಕಿನ ವಿಪತ್ತು ನಿರ್ವಹಣೆ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಐ.ರೋಡಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿದರು.ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ತಹಸೀಲ್ದಾರ್ ಮಂಗಳಾ.ಎಂ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ವಿಪತ್ತು ನಿರ್ವಹಣೆ ಕುರಿತಾದ ಸಭೆ ನಡೆಸಿದರು. ತಾಲೂಕು ಮಟ್ಟದ ಅಧಿಕಾರಿಗಳ ಈ ಸಭೆಯಲ್ಲಿ ಮಾತನಾಡಿ, ಇಲಾಖೆವಾರು ಅಧಿಕಾರಿ ಹಾಗೂ ಸಿಬ್ಬಂದಿ ನಿರ್ವಹಿಸುವ ಕರ್ತವ್ಯದ ಬಗ್ಗೆ ನಿರ್ದೇಶನ ನೀಡಿದರು. ವಿಪತ್ತಿನ ನಿರ್ವಹಣೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಪರೀಕ್ಷೆ ಮಾಡುವುದು, ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದರೆ ಅವುಗಳನ್ನು ದುರಸ್ಥಿ ಮಾಡಿಸುವುದು, ಅಗ್ನಿಶಾಮಕ ದಳದವರು ಪ್ರವಾಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮ ಹಾಗೂ ಬಳಸುವ ಉಪಕರಣಗಳ ಸುಸ್ಥಿತಿ ಬಗ್ಗೆ ಮುಂಜಾಗೃತೆ ವಹಿಸುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಂಗಳಾ.ಎಂ ಮಾತನಾಡಿ, 2019 ರಲ್ಲಿ ಆದ ಪ್ರವಾಹದ ಬಗ್ಗೆ ತಮಗೆಲ್ಲ ತಿಳಿದಿದ್ದು, ತಾಲೂಕಿನ 12 ಗ್ರಾಮಗಳ ಮೇಲೆ ಆಗುವ ಪ್ರವಾಹದ ಪರಿಣಾಮದ ಬಗ್ಗೆ ಈಗಲೇ ಎಚ್ಚರಿಕೆ ಇರಬೇಕು. ಮುಂಜಾಗೃತಾ ಕ್ರಮಕೈಗೊಳ್ಳುವ ಬಗ್ಗೆ ಸಿದ್ಧತೆ ಇರಬೇಕು. ವಿಪತ್ತು ನಿರ್ವಹಣೆಗೆ ಮಾಡಿದ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಅನಾಹುತಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆಗಳನ್ನು ನೀಡಿದರು.ಸಭೆಯಲ್ಲಿ ಹೆಸ್ಕಾಂ ಎಇಇ ಪ್ರಕಾಶ ಪೂಚಗುಂಡಿ, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ, ತಾಪಂ ಇಲಾಖೆಯ ಎಸ್.ಎಸ್.ಅಂಗಡಿ, ಆರೋಗ್ಯ ಇಲಾಖೆಯ ಡಾ.ಅನೀಲ ಉಕ್ಕಲಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎಸ್.ಬಂಡಿ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಎ.ಕೆ.ಮಕಾಂದಾರ, ಅಗ್ನಿ ಶಾಮಕ ಇಲಾಖೆಯ ಬಿ.ಪಿ.ಮರಡಿ, ಪಿಆರ್‌ಡಿ ಇಲಾಖೆಯ ಎ.ಎಸ್.ತೋಪಲಕಟ್ಟಿ ಸೇರಿದಂತೆ ಮುಂತಾದವರು ಇದ್ದರು.