ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಯಾವುದೇ ಕಡತವಿರಲಿ ಅದನ್ನು ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಡಳಿತ ಮಂಡಳಿಗೆ ಕಿವಿಮಾತು ಹೇಳಿದ್ದಾರೆ.ನಗರದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ ಆವರಣದಲ್ಲಿ ನಡೆದ ನೂತನ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ಮತ್ತು ಕಿರಿಯರನ್ನು ಒಳಗೊಂಡ ಸಮಿತಿ ರಚಿಸಿದ್ದು ಮಡಿಕೇರಿ ನಗರದ ಜನತೆಗೆ ತೊಂದರೆಯಾಗದ ಹಾಗೆ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು. ಹಲವು ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಮೂಡಾ ಕಚೇರಿಯಲ್ಲಿ ಇತ್ಯರ್ಥವಾಗದೇ ಇರುವ ಕಡತಗಳ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಐದು ವರ್ಷಕೊಮ್ಮೆ ನಡೆಯುವ ಸಿಡಿಪಿ ಪ್ಲಾನ್ 2021 ರಲ್ಲಿ ಆಗಬೇಕಿದ್ದು ಅದನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಮೂಡಾಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕರೊಂದಿಗೆ ಚರ್ಚಿಸಿದ್ದು ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಡಿಕೇರಿ ಮಂಜಿನ ನಗರಿ ಎಂದು ಖ್ಯಾತಿ ಪಡೆದಿದ್ದು ಈ ಹೆಸರು ಉಳಿಯಲು ಮಡಿಕೇರಿ ನಗರದ ಪ್ರಕೃತಿಯನ್ನು ಸುಂದರವಾಗಿ ಇಟ್ಟುಕೊಳ್ಳುವ ಪ್ರಯತ್ನ ಎಲ್ಲರಿಂದಲೂ ಆಗಬೇಕು. ನೂತನ ಆಡಳಿತ ಮಂಡಳಿಯಿಂದ ಉತ್ತಮ ಕೆಲಸ ಆಗುವ ಭರವಸೆ ತಮಗೆ ಇದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಮಾತನಾಡಿ ಮಡಿಕೇರಿ ನಗರವನ್ನು ಸಮಸ್ಯೆ ಮುಕ್ತ ನಗರವಾಗಿಸಲು ಮೂಡಾ ಆಡಳಿತ ಮಂಡಳಿ ಪಣ ತೊಡಬೇಕು. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ನಾಮನಿರ್ದೇಶನ ಮಾಡುವ ಮೂಲಕ ಗೌರವಿಸಲಾಗುತ್ತದೆ. 24/ 7 ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನ ಮಾನ ನೀಡುವಲ್ಲಿ ಶಾಸಕರು ಮತ್ತು ನಾಯಕರು ವಿಳಂಬ ಮಾಡಬಾರದು ಎಂದು ಹೇಳಿದರು.
ಕೆಪಿಸಿಸಿ ಮುಖಂಡ ಟಿ.ಪಿ.ರಮೇಶ್, ಮುಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿದರು.ನಂಜನಗೂಡು ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮಾಜಿ ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ನೂತನ ಮೂಡಾ ಸದಸ್ಯರಾದ ಕಾನೆಹಿತ್ಲು ಮೊಣ್ಣಪ್ಪ, ಚಂದ್ರಶೇಖರ್, ಮೀನಾಜ್ ಪ್ರವೀಣ್, ಸುದಯ್ ನಾಣಯ್ಯ,ಕೂಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ವಿ.ಪಿ.ಶಶಿಧರ್, ಸತೀಶ್ ಕುಮಾರ್, ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಪ್ರಮುಖರಾದ ಜೆ.ಜೆ.ಕಾವೇರಪ್ಪ, ನೆರವಂಡ ಉಮೇಶ್, ಮಂದ್ರಿರ ಮೋಹನ್ ದಾಸ್, ಕೊಲ್ಯದ ಗಿರೀಶ್, ಯಲ್ಲಪ್ಪ, ಜಯೇಂದ್ರ, ಆದಂ, ಕೆ.ಜೆ.ಪೀಟರ್, ಅಂಬೆಕಲ್ ನವೀನ್, ಜಿ .ಸಿ.ಜಗದೀಶ್, ಸುರೇಶ್ ಸೇರಿದಂತೆ ಪ್ರಮುಖರು ಇದ್ದರು.
ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು. ಮಂಜುಳಾ ರಾಮಕೃಷ್ಣ ಭಟ್ ನಿರೂಪಿಸಿದರು.