ಕೃಷ್ಣಾ ಕಣಿವೆಯ ನೀರಾವರಿ ವ್ಯಾಜ್ಯಗಳನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ತರುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೂರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕೃಷ್ಣಾ ಕಣಿವೆಯ ನೀರಾವರಿ ವ್ಯಾಜ್ಯಗಳನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ತರುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೂರಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾನಾ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ನಾನು ಜಲ‌ಸಂಪನ್ಮೂಲ ಸಚಿವನಾದ ಮೇಲೆ ₹3700 ಕೋಟಿ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯುಕೆಪಿ 3ನೇ ಹಂತದಲ್ಲಿ ₹21 ಸಾವಿರ ಕೋಟಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ 80 ಟಿಎಂಸಿ ನೀರು ನಿಮಗೆ ಸಿಗಲಿದೆ ಎಂದರು.ಹಿಂದೆ ಒಣಭೂಮಿ ಎಂದು ಕರೆಯುತ್ತಿದ್ದ ಈ‌ ಜಿಲ್ಲೆಗೆ ನೀರಾವರಿ ಒದಗಿಸುವ ಕೆಲಸವನ್ನು ಇಲ್ಲಿನ ಸಚಿವರು, ಶಾಸಕರು ಮಾಡುತ್ತಿದ್ದಾರೆ. ಇಲ್ಲಿ ನೀರು ಒದಗಿಸುವ ಮೂಲಕ ಇಲ್ಲಿನ ರೈತರು ಲಿಂಬೆ, ದ್ರಾಕ್ಷಿ, ದಾಳಿಂಬೆ, ಕಬ್ಬು ಬೆಳೆಯುವ ಮೂಲಕ ರೈತರ ಬದುಕು ಹಸನಾಗಿಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ನಿಮ್ಮೆಲ್ಲರ ಸೇವೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ವಿಜಯಪುರ ಜಿಲ್ಲೆ ಲಿಂಬೆನಾಡು ಎಂಬ ಖ್ಯಾತಿ ಹೊಂದಿದೆ. ಲಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರಿಯಿಲ್ಲ. ಶಂಭುಗಿಂತ ಅಧಿಕ ದೇವರಿಲ್ಲ. ನಂಬಿಕೆಗಿಂತ ದೊಡ್ಡಗುಣ ಮತ್ತೊಂದಿಲ್ಲ. ಶ್ರೇಷ್ಠ ಹುಳಿ ಲಿಂಬೆ ಹುಳಿ, ಲಿಂಬೆ ಪೂಜೆಗೆ, ದೃಷ್ಟಿ ತೆಗೆಯಲು ಉಪಯೋಗ. ನಂಬಿಕೆಗಿಂತ ದೊಡ್ಡ ಗುಣ ಇಲ್ಲ. ನಂಬಿಕೆಯ ಕುರಿತು, ನಿಂಬೆ ಹಣ್ಣಿನ ಕುರಿತು ವಿವರಿಸಿದರು.ನನಗೆ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ನೀಡಿ ಸನ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಗೋಳಗುಮ್ಮಟ ನೀಡಿದ್ದಾರೆ. ಇದೇ ಸರ್ಕಾರ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗೋದು, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋದು ಎಂದರು.

ವಿಜಯಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ಹೆಸರಿಟ್ಟಂತೆ, ದೇವರಹಿಪ್ಪರಗಿ ನಿಲ್ದಾಣಕ್ಕೆ ಮಡಿವಾಳ ಮಾಚಿದೇವರ ಹೆಸರು, ಸುರಪುರದಲ್ಲಿ ವೆಂಕಟಪ್ಪ ನಾಯಕನ ಹೆಸರು ಇಡುವುದು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಮಹಾತ್ಮರ ಹೆಸರನ್ನು ಇಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇತಿಹಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಶ್ಲಾಘಿಸಿದರು.

ನಾನು ಈ ಹಿಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ (ಬಿಜೆಪಿ) ಕೆರೆಯಲ್ಲಿದ್ದರೆ ಚೆನ್ನ, ತೆನೆ (ಜೆಡಿಎಸ್) ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮವನ್ನು ಮಾಡುವ ಕೈ (ಕಾಂಗ್ರೆಸ್) ನಾಡಿನಲ್ಲಿದ್ದರೆ ಚಂದ ಎಂದು ಹೇಳಿದ್ದೆ. ಅದರಂತೆ ನೀವೆಲ್ಲ ದಾನ ಧರ್ಮ ಮಾಡುವ ಈ ಕೈಯನ್ನು ನಾಡಿನಲ್ಲಿ ಇಟ್ಟಿದ್ದೀರಿ. ಇದರಿಂದಾಗಿಯೇ ಇಂದು ನಾವು ಜನಸೇವೆ‌ ಮಾಡುವ ಜೊತೆಗೆ ದೊಡ್ಡ ದೊಡ್ಡ ಅಭಿವೃದ್ಧಿ ಕೆಲಸ‌ಗಳನ್ನು ಮಾಡಲು ಅನುಕೂಲವಾಗಿದೆ ಎಂದರು.ಸಚಿವ ಎಂ.ಬಿ.ಪಾಟೀಲರ ಅಧ್ಯಕ್ಷತೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಲಾಗುತ್ತಿದೆ. ಸಚಿವ ಶಿವಾನಂದ‌ ಪಾಟೀಲ ಹೇಳಿದಂತೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಬೇಕೆಂದು ಅದರ ಬಗ್ಗೆ ಯೋಜನೆ ರೂಪಿಸಲಾಗುವುದು. ಪಂಚ ಗ್ಯಾರಂಟಿಗಳನ್ನು ಕೊಡುವ ಮೂಲಕ, ಇನ್ನುಳಿದ ಹಲವು ರಂಗದಲ್ಲಿ ಈ ಸರ್ಕಾರ ನಿಮ್ಮ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಇದೇ ರೀತಿ ನೀವು ನಮಗೆಲ್ಲ ಮುಂದಿನ ದಿನಗಳಲ್ಲೂ ಹೆಚ್ಚಿನ ಶಕ್ತಿ ತುಂಬಬೇಕು ಎಂದು ವಿನಂತಿಸಿದರು.ಬುದ್ಧಿ ಇದ್ದರೇ ಯುದ್ಧ ಗೆಲ್ತಾರೆ, ಗುಣ ಇದ್ದರೇ ಹೃದಯ ಗೆಲ್ತಾರೆ. ತಾಳ್ಮೆ ಇದ್ದರೇ ಜಗತ್ತನನ್ನೇ ಗೆಲ್ತಾರೆ.

-ಡಿ.ಕೆ.ಶಿವಕುಮಾರ,

ಡಿಸಿಎಂ.