ಕನ್ನಡಪ್ರಭ ವಾರ್ತೆ ಕಾಗವಾಡ ಹಿಪ್ಪರಗಿ ಬ್ಯಾರೇಜ್‌ನಿಂದ ಸುಮಾರು 2.5 ಟಿಎಂಸಿ ಕೃಷ್ಣಾ ನದಿ ನೀರು ಸೋರಿಕೆ ಪರಿಣಾಮ, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಗಡಿ ಗ್ರಾಮಗಳಿಗೂ ನೀರಿನ ಕೊರತೆ ಎದುರಾಗಿದೆ ಎಂದು ನೀರಾವರಿ ಇಲಾಖೆ ನಿವೃತ್ತ ಅಭಿಯಂತರ ಅರುಣಕುಮಾರ ಯಲಗುದ್ರಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಹಿಪ್ಪರಗಿ ಬ್ಯಾರೇಜ್‌ನಿಂದ ಸುಮಾರು 2.5 ಟಿಎಂಸಿ ಕೃಷ್ಣಾ ನದಿ ನೀರು ಸೋರಿಕೆ ಪರಿಣಾಮ, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಗಡಿ ಗ್ರಾಮಗಳಿಗೂ ನೀರಿನ ಕೊರತೆ ಎದುರಾಗಿದೆ ಎಂದು ನೀರಾವರಿ ಇಲಾಖೆ ನಿವೃತ್ತ ಅಭಿಯಂತರ ಅರುಣಕುಮಾರ ಯಲಗುದ್ರಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಶಿರೋಳ ತಾಲೂಕಿನ ಗೌರವಾಡ, ಔರವಾಡ, ಗಣೇಶವಾಡಿ, ಶೇಡಶ್ಯಾಳ, ಕೌವಟೆಗುಲಂದ, ಅಲಾಸ, ಬುಬನಾಳ, ನರಸಿಂಗವಾಡಿ, ಬಸ್ತವಾಡ, ಅಕಿವಾಟ ಮತ್ತು ಸೈನಿಕ ಟಾಕಳಿ ಗ್ರಾಮಗಳೊಂದಿಗೆ, ಕರ್ನಾಟಕದ ಕಾಗವಾಡ, ರಾಯಬಾಗ, ಚಿಕ್ಕೋಡಿ, ಅಥಣಿ, ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಿಗೆ ನೀರಿನ ಕೊರತೆಯಾಗಲಿದೆ. ಇಲ್ಲಿವರೆಗೆ ಮಹಾರಾಷ್ಟ್ರದ ರೈತರು ಹಿಪ್ಪರಗಿ ಆಣೆಕಟ್ಟೆಯ ಹಿನ್ನೀರನ್ನು ಮೇಲಿನ ಗ್ರಾಮದವರು ಉಪಯೋಗಿಸಿರುವುದು ಸಾಬೀತಾಗಿದೆ. ಈಗ ಮಹಾರಾಷ್ಟ್ರದ ಗಡಿ ಗ್ರಾಮಗಳ ರೈತರು ಸಹ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಗಡಿ ಭಾಗದ ಎರಡೂ ರಾಜ್ಯಗಳ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನೀರು ಬಿಡುವಂತೆ ಮನವಿ ಮಾಡಿದರು.ಈ ಬಗ್ಗೆ ಶಾಸಕ ಲಕ್ಷ್ಮಣ ಸವದಿಯವರು ಘಟಪ್ರಭಾ ಹಾಗೂ ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಡಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ನೀರು ಬಿಡಿಸುವ ಭರವಸೆ ನೀಡಿದ್ದಾರೆ. ಆಕಸ್ಮಿಕವಾಗಿ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಟ್ ಆದ ಪರಿಣಾಮ, ಈ ಭಾಗದ ಕೃಷ್ಣಾ ನದಿಯಲ್ಲಿ ಸುಮಾರು 7-8 ಅಡಿಗಳಷ್ಟು ನೀರಿನ ಮಟ್ಟ ಇಳಿಕೆ ಕಂಡುಬಂದಿದೆ. ಇದರಿಂದ ನದಿ ಪಾತ್ರದ ರೈತರು ಆತಂಕಗೊಂಡಿದ ಎಂದು ಅರುಣಕುಮಾರ ಯಲಗುದ್ರಿ ಮನವಿ ಮಾಡಿದ್ದಾರೆ.

-----

ಕೋಟ್‌

ಈಗಲೇ ಈ ಸ್ಥಿತಿಯಾದರೆ ಬೇಸಿಗೆಯಲ್ಲಿ ಹೇಗೆ?. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಈಗಲೇ ಕೃಷ್ಣಾ ನದಿಯಲ್ಲಿ ಸುಮಾರು 8 ಅಡಿ ನೀರು ಕಡಿಮೆಯಾಗಿದ್ದು, ಬೇಸಿಗೆ ಪ್ರಾರಂಭಕ್ಕಿಂತ ಮುಂಚೆಯೇ ಹೀಗಾದರೆ ಮಾರ್ಚ್‌ನಲ್ಲಿ ಕೃಷ್ಣೆ ಬರಿದಾಗುವ ಸಾಧ್ಯತೆ ಇದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ರೈತರ ಹಿತ ಕಾಪಾಡುವ ಜೊತೆಗೆ ಕರ್ನಾಟಕದ ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು.

ಅರುಣಕುಮಾರ ಯಲಗುದ್ರಿ, ನೀರಾವರಿ ಇಲಾಖೆಯ ನಿವೃತ್ತ ಇಂಜಿನಿಯರ್‌