ಅಪೌಷ್ಟಿಕತೆ ನಿವಾರಣೆ ಪ್ರಧಾನಿ ಮೋದಿ ಕನಸು

| Published : Oct 02 2024, 01:01 AM IST

ಸಾರಾಂಶ

ಪೋಷಣ್ ಯೋಜನೆಯಡಿ ಸಿಗಬೇಕಾದ ಎಲ್ಲ ಸೌಕರ್ಯ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು

ಶಿರಹಟ್ಟಿ: ಮಗು ತಾಯಿಯ ಗರ್ಭದಲ್ಲಿಯೇ ಪೌಷ್ಟಿಕವಾಗಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಪೋಷಣ್ ಯೋಜನೆ ಜಾರಿಗೆ ತಂದಿದ್ದು, ಪ್ರತಿಯೊಂದು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಬಗ್ಗೆ ಮಗುವಿನ ತಾಯಿ ಸೇರಿದಂತೆ ಪೋಷಕರಿಗೆ ಹೆಚ್ಚೆಚ್ಚು ಜಾಗೃತಿ ಆಯೋಜಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಕೇಂದ್ರ ಸಂವಹನ ಇಲಾಖೆ ಧಾರವಾಡ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಏರ್ಪಡಿಸಿದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳಿಗೆ ಪೌಷ್ಟಿಕತೆಯುಳ್ಳ ಆಹಾರ ಪದಾರ್ಥ ನೀಡಲಾಗುತ್ತಿದೆ. ಪೋಷಣ್ ಯೋಜನೆಯಡಿ ಸಿಗಬೇಕಾದ ಎಲ್ಲ ಸೌಕರ್ಯ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಿಗೆ ಸರಿಯಾದ ಜಾಗೃತಿ ಅರಿವನ್ನು ಅಂಗನವಾಡಿ ಕಾರ್ಯಕರ್ತೆಯರು ಮನದಟ್ಟು ಮಾಡಬೇಕು. ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಈ ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೆಕು ಎಂದು ಸಲಹೆ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಆಹಾರ ಪದ್ಧತಿಯ ಬದಲಾವಣೆಯಿಂದ ಮನುಷ್ಯರ ದೇಹ ಪೌಷ್ಟಿಕಾಂಶ ಇಲ್ಲದೆ ನಾನಾ ರೋಗಗಳಿಗೆ ತುತ್ತಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಿಗುವಂತಹ ತರಕಾರಿ, ಸೊಪ್ಪು, ಕಾಳು, ಮೊಟ್ಟೆ, ಮೊಸರು, ತುಪ್ಪ ಸೇವಿಸಬೇಕು ಎಂದು ಹೇಳಿದರು.

ಮಕ್ಕಳು,ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುತ್ತಾ ಆರೋಗ್ಯವಂತ ಸದೃಢ ದೇಹ ಹೊಂದಿ ಭವಿಷ್ಯದ ಭಾರತಕ್ಕೆ ಆಧಾರವಾಗಬೇಕು. ಏಕದಳ- ದ್ವಿದಳ ಧಾನ್ಯ, ತರಕಾರಿ, ಹಸಿರು ಸೊಪ್ಪು, ಮೊಳಕೆ ಬರಿಸಿದ ಕಾಳು ಪೌಷ್ಟಕಾಂಶಯುಕ್ತ ಆಹಾರಗಳನ್ನು ನಿಯಮಿತವಾಗಿ ಬಳಸಿ ಉತ್ತಮ ಆರೋಗ್ಯ ಹೊಂದುವಂತಾಗಬೇಕು ಎಂದು ತಿಳಿಸಿದರು.

ಗರ್ಭಿಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆ,ಅನಾರೋಗ್ಯಗಳಾದ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣ ತಡೆಯಲು ಮುಖ್ಯವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರು, ಬಾಣಂತಿಯರು ಮತ್ತು ಮಕ್ಕಳನ್ನು ಪೋಷಣೆ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಮಕ್ಕಳು ಪೌಷ್ಟಿಕವಾಗಿ ಜನಿಸಿದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪಟ್ಟಿ ಸಿದ್ಧತೆ ಮಾಡಿಕೊಂಡು ಪ್ರತಿ ಮನೆಗಳಿಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಕರ್ಯ ತಲುಪಿಸಬೇಕು. ಪಾಲಕರು, ತಾಯಂದಿರು ಮತ್ತು ಮಕ್ಕಳ ಬೆಳವಣಿಗೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳಿಗೆ ಪೌಷ್ಟಿಕತೆಯುಳ್ಳ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.ಈ ಯೋಜನೆಯಡಿ ಸಿಗಬೇಕಾದ ಎಲ್ಲ ಸೌಕರ್ಯ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮೀಣ ಭಾಗದ ಕೆಲ ಹಳ್ಳಿಗಳಲ್ಲಿ ಈ ಯೋಜನೆಗಳ ಬಗ್ಗೆ ಪರಿವೇ ಇರುವುದಿಲ್ಲ ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಸಿಡಿಪಿಓ ಮೃತ್ತುಂಜಯ ಗುಡ್ಡದಾನವೇರಿ, ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ್‌, ಉಪಾಧ್ಯಕ್ಷೆ ಗಂಗವ್ವ ತಳವಾರ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ನೇತ್ರಾ ಸಜ್ಜನರ, ಮೋಹನ್ ಗುತ್ತೆಮ್ಮನವರ, ಕೇಂದ್ರ ಸಂವಹನ ಇಲಾಖೆಯ ಸಂಯೋಜಕ ಮುರುಳಿಧರ ಕಾರಬಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಬೆಳ್ಳಟ್ಟಿ ಗ್ರಾಮದ ಹಿರಿಯರು ಇದ್ದರು.