ಸಮಾಜಕ್ಕೆ ಮರುಳಸಿದ್ಧ ಶಿವಯೋಗಿಗಳ ಸೇವೆ ಅಪಾರ: ಶಾಸಕ ಲಕ್ಷ್ಮಣ ಸವದಿ

| Published : Oct 02 2024, 01:01 AM IST

ಸಾರಾಂಶ

ನಾಡಿನ ಪ್ರಗತಿ ಮತ್ತು ಏಳ್ಗೆಯಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಅಥಣಿ ನೆಲದಲ್ಲಿ ಶೆಟ್ಟರ ಮಠದ ಮರುಳಸಿದ್ದ ಶಿವಯೋಗಿಗಳ ಸೇವೆ ಅಪಾರವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಾಡಿನ ಪ್ರಗತಿ ಮತ್ತು ಏಳ್ಗೆಯಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಅಥಣಿ ನೆಲದಲ್ಲಿ ಶೆಟ್ಟರ ಮಠದ ಮರುಳಸಿದ್ದ ಶಿವಯೋಗಿಗಳ ಸೇವೆ ಅಪಾರವಾಗಿದ್ದು, ಅಥಣಿ ನಾಡಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಆದರ್ಶ ಮಾರ್ಗವನ್ನು ತೋರಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸುಕ್ಷೇತ್ರ ಶೆಟ್ಟರ ಮಠದಲ್ಲಿ ನಡೆದ ಮರುಳಸಿದ್ಧ ಶಿವಯೋಗಿಗಳವರ 132ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮಠ, ಮಾನ್ಯಗಳು ಶಿಕ್ಷಣ, ಸಂಸ್ಕಾರ, ಸಂಸ್ಕೃತಿ, ದಾಸೋಹ, ಸತ್ಸಂಗದಂತಹ ಕಾರ್ಯಕ್ರಮಗಳ ಮೂಲಕ ನಾಡಿನ ಸೇವೆಯಲ್ಲಿ ತೊಡಗಿಕೊಂಡಿವೆ. ಅಥಣಿ ಪುಣ್ಯ ಭೂಮಿ ಹಾಗೂ ಆಧ್ಯಾತ್ಮಿಕ ತವರೂರು. ಇಲ್ಲಿಯ ಮಠಮಾನ್ಯಗಳ ಸೇವೆ ಅಪಾರ ಮನುಷ್ಯ ನಿತ್ಯ ಹಲವಾರು ಜಂಜಾಟದಲ್ಲಿ ಸಿಲುಕಿದ ಸಂದರ್ಭದಲ್ಲಿ ಆಧಾತ್ಮಿಕ ಸಂದೇಶದ ಮೂಲಕ ಮಾನವ ಜನ್ಮ ಮೋಕ್ಷ ಹೊಂದಲು ಪೂಜ್ಯರು ದಾರಿ ತೋರುತ್ತಾರೆ. ಮಠದ ಪೀಠಾಧಿಪತಿ ಮರುಳಸಿದ್ದ ಸ್ವಾಮೀಜಿ ತಮ್ಮ ಸರಳ ಸಜ್ಜನಿಕೆಯ ಮೂಲಕ ಅಥಣಿಯ ಮನೆಮನಗಳಲ್ಲಿ ಖ್ಯಾತರಾಗಿದ್ದಾರೆ. ಶ್ರೀಮಂತ, ಬಡವ ಎನ್ನದೆ ಸಕಲರ ಶ್ರೇಯಸ್ಸು ಬಯಸುತ್ತ ಜನಸಾಮಾನ್ಯರ ಸ್ವಾಮೀಜಿ ಎಂದು ಖ್ಯಾತರಾಗಿದ್ದು, ನಾಡಿನ ಏಳೆಗಾಗಿ ಅವರ ಸೇವೆ ಅಪಾರ ಎಂದು ಹೇಳಿದರು.

ಮಠದ ಪೀಠಾಧಿಪತಿ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಅಥಣಿ ಶಿವಯೋಗಿಗಳ ಆದರ್ಶದ ಬೆಳಕಿನಲ್ಲಿ ನಮ್ಮ ಶ್ರೀಮಠ ಸಾಗುತ್ತಿದೆ. ಅಥಣಿಯ ವಿಶಾಲ ಹೃದಯದ ಶರಣರ ಸಹಾಯ, ಸಹಕಾರದೊಂದಿಗೆ ಶ್ರೀಮಠ ಸಾಗುತ್ತಿದೆ. ಮುಂದೆಯೂ ಎಲ್ಲರ ಸಹಾಯ, ಸಹಕಾರ ಇರಲೆಂದು ಕೋರಿದರು.

ಇಂಗಳಗಾಂವ ಗುರುಲಿಂಗದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಪ್ರವಚನ ನೀಡಿದರು. ಈ ವೇಳೆ ಹಲವು ಗಣ್ಯರನ್ನು ಶ್ರೀಮಠದಿಂದ ಗೌರವಿಸಲಾಯಿತು.

ಮಲ್ಲಪ್ಪ ನಾಗರಾಳ, ಈರಯ್ಯ ಜಗದಾಳಮಠ, ಶಂಭುಲಿಂಗ ಕಾಜಿಬೀಳಗಿ, ಬಸಯ್ಯ ಮಠಪತಿ, ಶಿವು ಗೆಜ್ಜಿ, ಶಿವಾನಂದ ದಿವಾನಮಳ, ಮಹಾಂತೇಶ ಕೊಲ್ಲಾಪುರ, ಗಜಾನನ ಮಮದಾಪುರ, ಭೀಮಣ್ಣ ಪಾಟೀಲ, ಡಾ.ಆರ್.ಎಸ್ ದೊಡ್ಡನಿಂಗಪ್ಪಗೋಳ ಸೇರಿ ಇತರರು ಇದ್ದರು. ಡಾ.ಮಹಾಂತೇಶ ಉಕ್ಕಲಿ ಸ್ವಾಗತಿಸಿ ನಿರೂಪಿಸಿದರು. ಸಂಗಪ್ಪ ಉನ್ನಿ ವಂದಿಸಿದರು.