ಇಂದು ಮೂಡುಬಿದಿರೆಯಲ್ಲಿ ಗಾಂಧಿ ನಡಿಗೆ

| Published : Oct 02 2024, 01:01 AM IST

ಸಾರಾಂಶ

ಮೂಡುಬಿದಿರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ನೇತೃತ್ವದಲ್ಲಿ ಬೆಳಗ್ಗೆ ೯.೩೦ಕ್ಕೆ ಸ್ವರಾಜ್ಯ ಮೈದಾನದಿಂದ ಗಾಂಧಿ ನಡಿಗೆ ಆರಂಭವಾಗಲಿದ್ದು ಸಮಾಜ ಮಂದಿರದವರೆಗೆ ಪಾದಯಾತ್ರೆ ನಡೆಯಲಿದೆ.

ಮೂಡುಬಿದಿರೆ: ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿ ದಿನವಾದ ಅ.2ರಂದು ಬುಧವಾರ ಮೂಡುಬಿದಿರೆಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ತಿಳಿಸಿದರು.

ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೯೨೪ರಲ್ಲಿ ಬೆಳಗಾವಿಯಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ೧೦೦ ವರ್ಷ ಸಂದ ನೆನಪಿಗಾಗಿ ಕರ್ನಾಟಕ ಸರ್ಕಾರವು ಗಾಂಧಿ ನಡಿಗೆ ಕಾರ್ಯಕ್ರಮವನ್ನು ಗಾಂಧಿಜಯಂತಿ ದಿನವಾದ ಅ.೨ರಂದು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಅದರಂತೆ ಮೂಡುಬಿದಿರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ನೇತೃತ್ವದಲ್ಲಿ ಬೆಳಗ್ಗೆ ೯.೩೦ಕ್ಕೆ ಸ್ವರಾಜ್ಯ ಮೈದಾನದಿಂದ ಗಾಂಧಿ ನಡಿಗೆ ಆರಂಭವಾಗಲಿದ್ದು ಸಮಾಜ ಮಂದಿರದವರೆಗೆ ಪಾದಯಾತ್ರೆ ನಡೆಯಲಿದೆ.

ಬಳಿಕ ೧೦ ಗಂಟೆಗೆ ಸಮಾಜ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮವನ್ನು ನೇರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಗಾಂಧಿ ತತ್ವದ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೊಯಿದ್ದೀನ್ ಇದ್ದರು.